ಬೆಂಗಳೂರು, ಮಾ.18: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಹುಚ್ಚಾಟ ಕೆಲವೊಮ್ಮೆ ಎಷ್ಟು ಅಪಾಯಕಾರಿಯಾಗಬಹುದು ಎಂಬುದಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಒಂದು ವಿಚಿತ್ರ ಘಟನೆ ಸಾಕ್ಷಿಯಾಗಿದೆ. ರೀಲ್ಸ್ ಗಾಗಿ ಕುಟುಂಬವೊಂದು ತಮ್ಮದೇ ತಂದೆಯನ್ನು ಗೋಣಿಚೀಲದಲ್ಲಿ ಕಟ್ಟಿಕೊಂಡು ಕೊರಿಯರ್ ಕಚೇರಿಗೆ ತಂದು ಪಾರ್ಸೆಲ್ ಮಾಡಲು ಯತ್ನಿಸಿದ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಮಂಗಳವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ವೈಯಾಲಿಕಾವಲ್‌ನ ವಿನಾಯಕ ವೃತ್ತದ ಬಳಿ ಇರುವ ಒಂದು ಕೊರಿಯರ್ ಕಚೇರಿಗೆ ಕುಟುಂಬದ ಸದಸ್ಯರು ಗೋಣಿಚೀಲವನ್ನು ಹೊತ್ತುಕೊಂಡು ಬಂದಿದ್ದಾರೆ. ಅವರು ಅದನ್ನು ಮಂಗಳೂರಿಗೆ ಪಾರ್ಸೆಲ್ ಮಾಡಬೇಕು ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ. ಮೊದಲಿಗೆ ಇದನ್ನು ಸಾಮಾನ್ಯ ಪಾರ್ಸೆಲ್ ಎಂದುಕೊಂಡ ಸಿಬ್ಬಂದಿ, ಚೀಲ ಅಲುಗಾಡುತ್ತಿರುವುದನ್ನು ಗಮನಿಸಿ ಅನುಮಾನಗೊಂಡಿದ್ದಾರೆ.
ಅನುಮಾನ ಹೆಚ್ಚಾದ ಹಿನ್ನೆಲೆ ಸಿಬ್ಬಂದಿ ಚೀಲವನ್ನು ತೆರೆಯುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ. ಅದರೊಳಗೆ ಒಬ್ಬ ವೃದ್ಧ ವ್ಯಕ್ತಿ ಇದ್ದು, ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಹೊರತೆಗೆದು ನೀರು ಕುಡಿಸಿ ಸಹಾಯ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಆ ಕುಟುಂಬದ ಸದಸ್ಯರು “ಇದನ್ನು ಬೇರೆ ರಾಜ್ಯಕ್ಕೆ ಪಾರ್ಸೆಲ್ ಮಾಡಿ, ಹಣ ಕೊಡುತ್ತೇವೆ” ಎಂದು ಒತ್ತಾಯಿಸಿದ್ದಾರೆ.
ಆದರೆ ಜೀವಂತ ವ್ಯಕ್ತಿಯನ್ನು ಪಾರ್ಸೆಲ್ ಮಾಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದ ಕೊರಿಯರ್ ಸಿಬ್ಬಂದಿ, ಈ ವಿಷಯದಲ್ಲಿ ಯುವಕರೊಂದಿಗೆ ವಾಗ್ವಾದಕ್ಕೂ ಇಳಿದಿದ್ದಾರೆ. ನಂತರ ಸಿಬ್ಬಂದಿ ತಕ್ಷಣವೇ ವೈಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಕರೆ ಮಾಡುತ್ತಿದ್ದಂತೆಯೇ ಆ ಐವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಎಲ್ಲಾ ದೃಶ್ಯಗಳು ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅದನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಳಿಕ ಆರೋಪಿಗಳನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಈ ಘಟನೆ ಹಿಂದೆ ‘ಪ್ರ್ಯಾಂಕ್ ವಿಡಿಯೋ’ ಎಂಬ ಅಸಲಿ ಉದ್ದೇಶ ಇರುವುದಾಗಿ ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಈ ತಂಡದಲ್ಲಿ ಮಹಿಳೆಯರು ಮತ್ತು ಯುವತಿಯರು ಸೇರಿ ಐವರು ಇದ್ದರು. ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಬಸ್‌ಗಳ ಪ್ರಯಾಣ ದರ ಏರಿಕೆ ಮತ್ತು ಸೀಟು ಸಿಗದ ಸಮಸ್ಯೆಯನ್ನು ಹಾಸ್ಯಾತ್ಮಕವಾಗಿ ತೋರಿಸಲು ಈ ರೀತಿ ಪ್ರ್ಯಾಂಕ್ ವಿಡಿಯೋ ಮಾಡಲಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
ಈ ಘಟನೆ ಬಗ್ಗೆ ಯುವತಿಯೊಬ್ಬಳು ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದು, “ನಾವು ಮಾಡಿದ್ದು ತಪ್ಪು ಎಂದು ಈಗ ಗೊತ್ತಾಗಿದೆ. ಯಾರೂ ಈ ರೀತಿಯ ಅಪಾಯಕಾರಿ ಪ್ರ್ಯಾಂಕ್ ಮಾಡಲು ಹೋಗಬೇಡಿ. ನಮ್ಮಿಂದ ಮತ್ತೆ ಇಂತಹ ತಪ್ಪು ನಡೆಯುವುದಿಲ್ಲ” ಎಂದು ಮನವಿ ಮಾಡಿಕೊಂಡಿದ್ದಾಳೆ.





