ಬೆಂಗಳೂರು, ಫೆ.9: ವೇಗದ ಬದುಕು, ಕೆಲಸದ ಒತ್ತಡ, ಮಕ್ಕಳ ಜವಾಬ್ದಾರಿ, ಸಂಸಾರದ ಜಂಜಾಟ… ಇವೆಲ್ಲದರ ನಡುವೆ ಬೆಂಗಳೂರು ನಗರದ ಜನರಿಗೆ ಸಂಬಂಧಗಳಿಗೆ ಸಮಯವೇ ಸಿಗುವುದಿಲ್ಲ ಎಂಬ ಮಾತು ಸಾಮಾನ್ಯ. ಈ ನಗರದಲ್ಲಿ ಮನೆಗೆಲಸದವರನ್ನು ಕೇವಲ ಕೆಲಸಕ್ಕೆ ಮಾತ್ರ ಸೀಮಿತವಾಗಿಯೇ ನೋಡುತ್ತಾರೆ ಎಂಬ ಆರೋಪವೂ ಆಗಾಗ ಕೇಳಿಬರುತ್ತದೆ. ಆದರೆ ಬೆಂಗಳೂರಿನಲ್ಲಿ ನಡೆದ ಒಂದು ಸಣ್ಣ ಹಾಗೂ ಅತ್ಯಂತ ಹೃದಯಸ್ಪರ್ಶಿ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಬೆಂಗಳೂರಿನ ನೇಹಾ ಹರ್ಚಂದಾನಿ ಮತ್ತು ಅವರ ಪತಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ, ಅವರ ಮನೆಯಲ್ಲಿ ಕೆಲಸ ಮಾಡುವ ಮಹಿಳೆ ನೀಡಿದ ಸಣ್ಣ ಉಡುಗೊರೆ ಎಲ್ಲರ ಮನ ಗೆದ್ದಿದೆ. ಯಾವುದೇ ದುಬಾರಿ ಗಿಫ್ಟ್ ಅಲ್ಲ, ಕೇವಲ ಒಂದು ಗುಲಾಬಿ ಹೂವು ಮತ್ತು ಚಾಕೊಲೇಟ್. ಆದರೆ ಅದರ ಹಿಂದಿನ ಪ್ರೀತಿ, ಗೌರವ ಮತ್ತು ಆತ್ಮೀಯತೆ ಈ ಉಡುಗೊರೆಯನ್ನು ಅಮೂಲ್ಯವಾಗಿಸಿದೆ.
ವೈರಲ್ ಆಗಿರುವ ಈ ವಿಡಿಯೋವನ್ನು ನೇಹಾ ಹರ್ಚಂದಾನಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮನೆಗೆಲಸದ ಮಹಿಳೆ ಕೈಯಲ್ಲಿ ಗುಲಾಬಿ ಮತ್ತು ಚಾಕೊಲೇಟ್ ಹಿಡಿದು ನಾಚಿಕೆಯಿಂದ ನಿಂತಿರುವುದು ಕಾಣುತ್ತದೆ. ನೇಹಾ ಅವರು “ದೀದಿ, ಇದು ಏನು?” ಎಂದು ಕೇಳಿದಾಗ, ಆ ಮಹಿಳೆ “ಇವತ್ತು ನಿಮ್ಮ ವಿವಾಹ ವಾರ್ಷಿಕೋತ್ಸವ ಅಲ್ವಾ? ನನ್ನ ಕಡೆಯಿಂದ ಚಿಕ್ಕ ಉಡುಗೊರೆ” ಎಂದು ನಗುಮುಖದಿಂದ ಹೇಳುತ್ತಾರೆ.
ನೇಹಾ ಹರ್ಚಂದಾನಿ ಅವರು “ಅಯ್ಯೋ… ಎಷ್ಟು ಕ್ಯೂಟ್!” ಎಂದು ಪ್ರತಿಕ್ರಿಯಿಸುತ್ತಾರೆ. ಅದೇ ವೇಳೆ ಅವರ ಪತಿ ಆ ಮಹಿಳೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ದೃಶ್ಯ ವಿಡಿಯೋದಲ್ಲಿದೆ.. ಮನೆಗೆಲಸದ ಮಹಿಳೆಯನ್ನು ಕೇವಲ ಕೆಲಸಗಾರ್ತಿ ಎಂದು ಅಲ್ಲ, ಮನೆಯ ಸದಸ್ಯೆಯಂತೆ ಗೌರವಿಸುವ ಈ ನಡೆ ನೆಟ್ಟಿಗರ ಮನಗೆದ್ದಿದೆ.
ಇನ್ನೊಂದು ವಿಶೇಷ ಸಂಗತಿ ಎಂದರೆ, ಈ ಉಡುಗೊರೆಯನ್ನು ತರುವುದಕ್ಕಾಗಿ ಆ ಮಹಿಳೆ ತನ್ನ ಗಂಡನಿಗೆ ಬ್ಲಿಂಕಿಟ್ ಮೂಲಕ ಆರ್ಡರ್ ಮಾಡಲು ಹೇಳಿದ್ದಾರಂತೆ. ಇದು ಆಕೆಯ ಪ್ರಾಮಾಣಿಕತೆ ಮತ್ತು ಪ್ರೀತಿಯ ಮನಸ್ಸನ್ನು ತೋರಿಸುತ್ತದೆ. ಆಕೆಯ ಸರಳತೆ ಮತ್ತು ಹೃದಯಪೂರ್ವಕ ಶುಭಾಶಯಗಳು ಈ ದಂಪತಿಗೆ ಮಾತ್ರವಲ್ಲ, ವಿಡಿಯೋ ನೋಡಿದ ಸಾವಿರಾರು ಜನರಿಗೂ ಸಂತಸ ತಂದಿವೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇದು ಶುದ್ಧ ಪ್ರೀತಿ”, “ಅತ್ಯಂತ ಸಿಹಿಯಾದ ಕ್ಷಣ”, “ಮಾನವೀಯತೆ ಇನ್ನೂ ಜೀವಂತವಾಗಿದೆ” ಎಂಬಂತ ಕಮೆಂಟ್‌ಗಳು ಹರಿದು ಬರುತ್ತಿವೆ. ಕೆಲವರು “ಇದು ಹಣದಿಂದ ಕೊಳ್ಳಲಾಗದ ಸಂಬಂಧ” ಎಂದೂ ಅಭಿಪ್ರಾಯಪಟ್ಟಿದ್ದಾರೆ.





