ಬೆಂಗಳೂರು ನಗರವನ್ನು ಹಸಿರುಮಯ, ಪರಿಸರ ಸ್ನೇಹಿ ಹಾಗೂ ಸುಸ್ಥಿರ ನಗರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯೊಂದಿಗೆ, ನಾಡಪ್ರಭು ಕೆಂಪೇಗೌಡ ಜಯಂತಿಯ ಅಂಗವಾಗಿ ಶನಿವಾರ ಒಂದೇ ದಿನ 15 ಲಕ್ಷ ಸಸಿಗಳನ್ನು ನೆಡುವ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಗಿದೆ.
ಈ ಹಿಂದೆ ಮಧ್ಯಪ್ರದೇಶದ ಇಂದೋರ್ ನಗರವು 2024ರ ಜುಲೈನಲ್ಲಿ ಕೇವಲ 12 ಗಂಟೆಗಳ ಅವಧಿಯಲ್ಲಿ 12.40 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಗಿನ್ನಿಸ್ ದಾಖಲೆ ನಿರ್ಮಿಸಿತ್ತು. ಇದೀಗ ಬೆಂಗಳೂರು ಈ ಸಾಧನೆಯನ್ನು ಮೀರಿಸಿ, ಒಂದೇ ದಿನದಲ್ಲಿ 15 ಲಕ್ಷ ಸ್ಥಳೀಯ ಸಸಿಗಳನ್ನು ನೆಡುವ ಮೂಲಕ ಹೊಸ ದಾಖಲೆ ಸ್ಥಾಪಿಸಿದೆ. ಗಿನ್ನಿಸ್ ದಾಖಲೆಗಾಗಿ ಗಿಡಗಳ ಎಣಿಕೆ ಹಾಗೂ ಪರಿಶೀಲನೆಗೆ ಸುಮಾರು 1 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪರಿಶೀಲನಾ ವರದಿಯ ಆಧಾರದ ಮೇಲೆ 15 ಲಕ್ಷ ಸಸಿಗಳು ನೆಡಲಾಗಿರುವುದನ್ನು ದೃಢಪಡಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕೃತ ದಾಖಲೆ ಪ್ರಮಾಣಪತ್ರವನ್ನು ಶೀಘ್ರದಲ್ಲೇ ಗಿನ್ನಿಸ್ ಸಂಸ್ಥೆ ನೀಡಲಿದೆ ಎಂದು ತಿಳಿದುಬಂದಿದೆ.
ಈ ಬೃಹತ್ ಹಸಿರು ಅಭಿಯಾನವು ನಾಡಪ್ರಭು ಕೆಂಪೇಗೌಡ ಜಯಂತಿಯ ವಿಶೇಷ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ನಾಗರಿಕರು, ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ನಿವಾಸಿಗಳ ಕಲ್ಯಾಣ ಸಂಘಗಳ ಸದಸ್ಯರು, ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒಗಳು), ಕಾರ್ಪೊರೇಟ್ ಸ್ವಯಂಸೇವಕರು ಹಾಗೂ ವಿವಿಧ ಪರಿಸರ ಸಂಘಟನೆಗಳು ಉತ್ಸಾಹದಿಂದ ಪಾಲ್ಗೊಂಡರು. ಎಲ್ಲರೂ ಒಟ್ಟಾಗಿ ಹಸಿರು ಹಾಗೂ ಸುಸ್ಥಿರ ಬೆಂಗಳೂರಿನ ನಿರ್ಮಾಣಕ್ಕೆ ಕೈಜೋಡಿಸಿದರು.
ಗಿಡಗಳನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ, ಬನಶಂಕರಿ 6ನೇ ಹಂತ, ಶಿವರಾಮ ಕಾರಂತ ಬಡಾವಣೆ, ಆಕ್ಸಿಜನ್ ಟ್ರೀ ಪಾರ್ಕ್‌ಗಳು ಹಾಗೂ ಮಿಯಾವಾಕಿ ಅರಣ್ಯ ಪ್ರದೇಶಗಳು ಸೇರಿದಂತೆ ಬಿಡಿಎ ಅಭಿವೃದ್ಧಿಪಡಿಸಿರುವ ವಿವಿಧ ಹಸಿರು ವಲಯಗಳಲ್ಲಿ ನೆಡಲಾಯಿತು. ನಗರವನ್ನು ಕಾಂಕ್ರೀಟ್ ಕಾಡಿನಿಂದ ಮತ್ತೆ ಹಸಿರು ತಾಣವಾಗಿ ಪರಿವರ್ತಿಸುವ ಗುರಿಯೊಂದಿಗೆ ಈ ಅಭಿಯಾನವನ್ನು ರೂಪಿಸಲಾಗಿತ್ತು.
ವಿಶೇಷವಾಗಿ, ನೆಡಲಾದ 15 ಲಕ್ಷ ಸಸಿಗಳಿಗೆ ಜಿಯೋ-ಟ್ಯಾಗ್ ಮಾಡಲಾಗಿದ್ದು, ಅವುಗಳ ಬೆಳವಣಿಗೆಯನ್ನು ಆನ್‌ಲೈನ್ ಮೂಲಕವೂ ಗಮನಿಸಲು ಸಾಧ್ಯವಾಗುತ್ತದೆ. ಇದರಿಂದ ಯೋಜನೆಯ ಪಾರದರ್ಶಕತೆ ಹಾಗೂ ನಿರಂತರ ಮೇಲ್ವಿಚಾರಣೆಗೆ ಸಹಾಯವಾಗಲಿದೆ. ಜೊತೆಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಪ್ರತಿನಿಧಿಗಳು ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಗಿಡಗಳ ಎಣಿಕೆ ಹಾಗೂ ಪರಿಶೀಲನೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಮುಂದಿನ ಮೂರು ವರ್ಷಗಳವರೆಗೆ ಈ ಸಸಿಗಳ ಪೋಷಣೆಗಾಗಿ ಜವಾಬ್ದಾರಿಯನ್ನು ಎನ್‌ಜಿಒಗಳಿಗೆ ವಹಿಸಲಾಗಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅನುದಾನವನ್ನು ಬಳಸಿಕೊಂಡು ಈ ಎನ್‌ಜಿಒಗಳು ಸಸಿಗಳ ನಿರ್ವಹಣೆ, ರಕ್ಷಣೆ ಮತ್ತು ಬೆಳವಣಿಗೆಯನ್ನು ಖಚಿತಪಡಿಸಲಿವೆ. ನೀರಿನ ಪೂರೈಕೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಬಿಡಿಎ ಒದಗಿಸಲಿದೆ.
ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರು ಮಾತನಾಡಿ, “15 ಲಕ್ಷ ಸ್ಥಳೀಯ ಸಸಿಗಳನ್ನು ಯಶಸ್ವಿಯಾಗಿ ನೆಡುವುದು ಬಿಡಿಎ ಕೈಗೊಂಡ ಅತ್ಯಂತ ಮಹತ್ವದ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲೂ ಸುಸ್ಥಿರತೆಯನ್ನು ಅಳವಡಿಸಿಕೊಂಡು ನಗರ ಯೋಜನೆಗೆ ಹೊಸ ದಿಕ್ಕು ನೀಡುತ್ತಿದ್ದೇವೆ. ಸುಸಜ್ಜಿತ ಹಾಗೂ ಪರಿಸರ ಸ್ನೇಹಿ ಬಡಾವಣೆಗಳ ನಿರ್ಮಾಣವೇ ನಮ್ಮ ಧ್ಯೇಯ. ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಪ್ರತಿಯೊಬ್ಬ ಸ್ವಯಂಸೇವಕ, ಸಂಸ್ಥೆ ಮತ್ತು ನಾಗರಿಕರಿಗೆ ಧನ್ಯವಾದಗಳು” ಎಂದು ಹೇಳಿದರು.





