ತೆರಿಗೆ ವಿವಾದ: ಈ ಮೂರು ದಿನ ಬೇಕರಿ, ಕಾಂಡಿಮೆಂಟ್ಸ್, ಹಾಲು ಮಾರಾಟ ಬಂದ್

0 (5)

ಬೆಂಗಳೂರು: ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ಬೇಕರಿ, ಚಹಾ ಅಂಗಡಿಗಳು, ಮತ್ತು ಕಾಂಡಿಮೆಂಟ್ಸ್‌ಗೆ 30 ಲಕ್ಷದಿಂದ 1 ಕೋಟಿ ರೂಪಾಯಿಗಳವರೆಗಿನ ಭಾರೀ ತೆರಿಗೆ ಪಾವತಿಯ ನೋಟಿಸ್‌ಗಳು ಜಾರಿಯಾಗಿವೆ. ಈ ನೋಟಿಸ್‌ಗಳಿಂದ ಕಂಗಾಲಾದ ವ್ಯಾಪಾರಿಗಳು ಜುಲೈ 21ರೊಳಗೆ ತೆರಿಗೆ ಪಾವತಿಸದಿದ್ದರೆ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನು ಎದುರಿಸುತ್ತಿದ್ದಾರೆ. ತೆರಿಗೆಯನ್ನು ಮನ್ನಾ ಮಾಡುವಂತೆ ಸರ್ಕಾರ ಮತ್ತು ತೆರಿಗೆ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, 10 ದಿನಗಳ ಗಡುವು ನೀಡಲಾಗಿದೆ. ಒಡ್ಡದಿದ್ದರೆ, ಜುಲೈ 23, 24, ಮತ್ತು 25ರಂದು ಬೇಕರಿ, ಕಾಂಡಿಮೆಂಟ್ಸ್, ಹಾಲು, ಹಾಲಿನ ಉತ್ಪನ್ನಗಳ ಮಾರಾಟ, ಸಿಗರೇಟ್, ಮತ್ತು ಕೆಲವು ತರಕಾರಿ ಅಂಗಡಿಗಳು ಬಂದ್ ಆಗಲಿವೆ.

ಕಾಂಡಿಮೆಂಟ್ಸ್ ಮಾಲೀಕ ಚಿಕ್ಕಯ್ಯ ಈ ಬಗ್ಗೆ ಪ್ರತಿಕ್ರಿಯಿಸಿ, “ನಮ್ಮ ಸಣ್ಣ ಅಂಗಡಿಯಲ್ಲಿ ಟೀ, ಕಾಫಿ, ಬ್ರೆಡ್, ಮತ್ತು ಪೇಪರ್ ಮಾರಾಟ ಮಾಡುತ್ತೇವೆ. ಜಿಎಸ್‌ಟಿಯ ಬಗ್ಗೆ ನಮಗೆ ತಿಳಿದಿಲ್ಲ. ಏಕಾಏಕಿ 23 ಲಕ್ಷ ರೂ. ತೆರಿಗೆ ಕಟ್ಟಲು ಹೇಗೆ ಸಾಧ್ಯ? ಸಾಲವನ್ನೂ ತೀರಿಸಲಾಗದ ಸ್ಥಿತಿಯಲ್ಲಿದ್ದೇವೆ. ತೆರಿಗೆ ಮನ್ನಾ ಮಾಡದಿದ್ದರೆ, ಜುಲೈ 25ರಂದು ಅಂಗಡಿಗಳನ್ನು ಮುಚ್ಚಿ ಧರಣಿ ಮಾಡುವೆವು. ಅಗತ್ಯವಿದ್ದರೆ ವಿಷ ತಗೊಂಡು ಸಾಯಲು ಸಿದ್ಧರಿದ್ದೇವೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಕರಿ ಮಾಲೀಕ ದಿನೇಶ್ ಆರ್.ಕೆ. ಕೂಡ, “ನಾಲ್ಕು ವರ್ಷದ ವ್ಯಾಪಾರಕ್ಕೆ 62 ಲಕ್ಷ ರೂ. ತೆರಿಗೆ ನೋಟಿಸ್ ಬಂದಿದೆ. ಇಂತಹ ದೊಡ್ಡ ಮೊತ್ತವನ್ನು ನಾನು ಕಂಡಿಲ್ಲ. ವ್ಯಾಪಾರವೇ ಮುಗಿಯುವ ಸ್ಥಿತಿಯಲ್ಲಿದೆ. ಜುಲೈ 23ರಿಂದ ಹಾಲು, ಮೊಸರು, ಬ್ರೆಡ್ ಮಾರಾಟವನ್ನು ನಿಲ್ಲಿಸುತ್ತೇವೆ. 25ರಂದು ಫ್ರೀಡಂ ಪಾರ್ಕ್‌ನಲ್ಲಿ ಕುಟುಂಬದೊಂದಿಗೆ ಪ್ರತಿಭಟನೆ ಮಾಡುತ್ತೇವೆ. ಈ ಬಾರಿ ತೆರಿಗೆಯನ್ನು ಮನ್ನಾ ಮಾಡಿ, ಮುಂದಿನ ದಿನಗಳಲ್ಲಿ ತೆರಿಗೆ ಪಾವತಿಸುತ್ತೇವೆ,” ಎಂದಿದ್ದಾರೆ.

ತೆರಿಗೆ ಇಲಾಖೆಯ ಅಧಿಕಾರಿಗಳು, ಫೋನ್‌ಪೇ ಮತ್ತು ಗೂಗಲ್‌ಪೇನಂತಹ ಡಿಜಿಟಲ್ ಪಾವತಿ ಸಂಸ್ಥೆಗಳಿಂದ ವ್ಯಾಪಾರಿಗಳ ಹಣಕಾಸು ವಿವರಗಳನ್ನು ಪಡೆದಿರುವುದಾಗಿ ತಿಳಿಸಿದ್ದಾರೆ. ಈ ತೆರಿಗೆ ವಿವಾದವು ಯಾವ ರೀತಿಯಲ್ಲಿ ಬಗೆಹರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version