ಬೆಂಗಳೂರು: ಬೆಂಗಳೂರು ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ದಿನದಿಂದ ದಿನಕ್ಕೆ ಆತಂಕ ಮೂಡಿಸುತ್ತಿದೆ. ಇದೀಗ ಯುವತಿಯೊಬ್ಬಳು ಕೇವಲ ಸ್ಕರ್ಟ್ ಧರಿಸಿದ್ದಕ್ಕಾಗಿ ಆಟೋ ಚಾಲಕನೊಬ್ಬ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿದ ಘಟನೆ ಇಂದಿರಾನಗರದಲ್ಲಿ ನಡೆದಿದೆ. ಈ ಘಟನೆಯನ್ನು ಆಕೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ಮತ್ತು ಆತಂಕವನ್ನು ಹುಟ್ಟುಹಾಕಿದೆ.
ಘಟನೆಯ ವಿವರ
ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಯುವತಿ ಮತ್ತು ಅವಳ ಸ್ನೇಹಿತ (ಯುವಕ) ಇಂದಿರಾನಗರಕ್ಕೆ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಆಟೋದಿಂದ ಇಳಿದ ಯುವತಿ ಮತ್ತು ಸ್ನೇಹಿತ ಅಲ್ಲಿಂದ ಹೊರಟರು. ಆದರೆ ಸ್ವಲ್ಪ ದೂರ ಹೋದ ಬಳಿಕ ಚಾಲಕ ಮತ್ತೆ ಬಂದು ಬಯ್ಯಲು ಆರಂಭಿಸಿದನು. “ಯಾಕೆ ಏನಾಯ್ತು ನಿಮಗೆ?” ಎಂದು ಸ್ನೇಹಿತ ಪ್ರಶ್ನಿಸಿದಾಗ, ಚಾಲಕ ನೇರವಾಗಿ ಯುವತಿಯತ್ತ ತಿರುಗಿ, “ಯಾಕೆ ಇಷ್ಟು ಸಣ್ಣ ಸ್ಕರ್ಟ್ ಹಾಕಿದ್ದೀಯಾ?” ಎಂದು ಕೇಳಿದನು.
ಇದಕ್ಕೆ ಸ್ನೇಹಿತ ತಕ್ಷಣವೇ ಉತ್ತರಿಸಿದನು, “ಅದು ಅವಳ ಇಷ್ಟ. ಅವಳಿಗೆ ಹೇಗೆ ಬೇಕೋ ಹಾಗೆ ಬಟ್ಟೆ ಹಾಕುತ್ತಾಳೆ, ನಿಮಗೇನು ಕಷ್ಟ?” ಎಂದನು. ಆದರೆ ಆಟೋ ಚಾಲಕ, “ಅವಳು ಇದೇ ತರಹದ ಬಟ್ಟೆ ಧರಿಸಿದರೆ ಜನರು ಅವಳ ಮೇಲೆ ಅತ್ಯಾಚಾರ ಮಾಡುತ್ತಾರೆ. ನಾನು ಕೂಡ ಆಕೆಯ ಮೇಲೆ ರೇಪ್ ಮಾಡಿಬಿಡ್ತೇನೆ!” ಎಂದು ಹೇಳಿದನು. ಈ ಮಾತುಗಳು ಯುವತಿ ಮತ್ತು ಸ್ನೇಹಿತರನ್ನು ಬೆಚ್ಚಿಬೀಳಿಸಿದವು. ಮಧ್ಯಾಹ್ನದ ಬಿಸಿಲಿನಲ್ಲಿ, ಜನಸಂದಣಿ ಇರುವ ಪ್ರದೇಶದಲ್ಲಿ, ಯುವಕನ ಸಮ್ಮುಖದಲ್ಲೇ ಇಂತಹ ದೌರ್ಜನ್ಯಕ್ಕೆ ಒಳಗಾಗಿರುವುದು ನಿಜಕ್ಕೂ ಆತಂಕದ ಸಂಗತಿ.
ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಸುತ್ತಮುತ್ತಲಿನ ಜನರು ಸೇರಲು ಶುರುವಾಯಿತು. ಗುಂಪು ಕೂಡುತ್ತಿದ್ದಂತೆ ಚಾಲಕ ಹೆದರಿ ಅಲ್ಲಿಂದ ತಪ್ಪಿಸಿಕೊಂಡು ಹೋದನು. ಯುವತಿಯು ತನ್ನ ಅನುಭವವನ್ನು ಹಂಚಿಕೊಳ್ಳುತ್ತಾ, “ಮಧ್ಯಾಹ್ನದ ಹೊತ್ತಿನಲ್ಲಿ, ಜನ ಸಂದಣಿ ಇರುವ ಸ್ಥಳದಲ್ಲಿ, ಅದು ಕೂಡ ಒಬ್ಬ ಯುವಕನು ಇರುವಾಗಲೇ, ಒಂದು ಹೆಣ್ಣಿನ ಮೇಲೆ ಈ ರೀತಿಯ ದೌರ್ಜನ್ಯ ನಡೆಸಿರುವುದು ನಿಜಕ್ಕೂ ಆತಂಕ ಮೂಡಿಸಿದೆ” ಎಂದು ಬರೆದುಕೊಂಡಿದ್ದಾರೆ.





