ಚೆನ್ನೈ/ಬೆಂಗಳೂರು, ನವೆಂಬರ್ 21: ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ದರೋಡೆಗಾರರು ತಮಿಳುನಾಡಿನ ಚೆನ್ನೈಗೆ ತೆರಳಿದ್ದಾರೆ ಎಂದು ತಿಳಿದುಬಂದಿದ್ದು, ಚೆನ್ನೈ ಪೊಲೀಸರು 5.3 ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಈ ದರೋಡೆಯಲ್ಲಿ ಸಿಎಂಎಸ್ (CMS) ಸೆಕ್ಯೂರಿಟಿ ಮಾಜಿ ಸಿಬ್ಬಂದಿ ಮತ್ತು ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಚೆನ್ನೈಯಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ. ಕೇವಲ 46 ಗಂಟೆಗಳೊಳಗೆ ಈ ಯಶಸ್ಸು ಸಾಧಿಸಿದ ಕರ್ನಾಟಕ ಪೊಲೀಸ್ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಾಶಯ ಕೋರಿದ್ದಾರೆ.
ನವೆಂಬರ್ 19ರ ಬುಧವಾರ ಅಶೋಕ ಪಿಲ್ಲರ್ ಜಂಕ್ಷನ್ ಬಳಿಯ ರಸ್ತೆಯಲ್ಲಿ ಸಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯ ಎಟಿಎಂ ಕ್ಯಾಶ್ ವ್ಯಾನ್ ಮೇಲೆ ಏಕಾಏಕಿ ದರೋಡೆಗಾರರು ದಾಳಿ ಮಾಡಿದ್ದರು. ಆರ್‌ಬಿಐ ಅಧಿಕಾರಿಗಳಂತೆ ಡ್ರೆಸ್ ಧರಿಸಿದ 5-6 ಮಂದಿ ದಾರೋಡೆಕೋರರು ವ್ಯಾನ್‌ನ್ನು ನಿಲ್ಲಿಸಿ, ಸಿಬ್ಬಂದಿಯನ್ನು ಧಮಕಿ ಹಾಕಿ, 7.11 ಕೋಟಿ ರೂಪಾಯಿ ದೋಚಿದ್ದರು. ದರೋಡೆಗಾರರು ವ್ಯಾನ್‌ನ ಡಿವಿಆರ್ (ಸಿಸಿಟಿವಿ ರೆಕಾರ್ಡರ್) ಸಹ ತೆಗೆದುಕೊಂಡಿದ್ದರಿಂದ ಆಂತರಿಕ ದೃಶ್ಯಗಳು ಲಭ್ಯವಾಗಿಲ್ಲ. ದರೋಡೆಯ ನಂತರ 45 ನಿಮಿಷಗಳ ಕಲ್ ಬಂದಿದ್ದು, ಇದರಿಂದ ಇನ್‌ಸೈಡರ್ ಮೇಲೆ ಶಂಕೆ ಮೂಡಿತ್ತು.
ಪೊಲೀಸ್ ತನಿಖೆಯಲ್ಲಿ, ದರೋಡೆಯ ಸ್ಥಳದ ಬಳಿಯ ಸಕ್ರಿಯ ಮೊಬೈಲ್ ನಂಬರ್‌ಗಳನ್ನು ಟ್ರ್ಯಾಕ್ ಮಾಡಿದಾಗ ಅಣ್ಣಪ್ಪ ನಾಯ್ಕ್ ಮತ್ತು ಸಿಎಂಎಸ್ ಮಾಜಿ ಉದ್ಯೋಗಿ ಒಬ್ಬರ ಸಂಪರ್ಕ ಬೆಳಕಿಗೆ ಬಂದಿತು. ಇಬ್ಬರೂ ಕಳೆದ 6 ತಿಂಗಳಿಂದ ಸ್ನೇಹಿತರಾಗಿದ್ದು, ದರೋಡೆಯನ್ನು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂದು ಪೊಲೀಸ್ ಸೋರ್ಸ್‌ಗಳು ತಿಳಿಸಿವೆ. ಅಣ್ಣಪ್ಪ ನಾಯ್ಕ್ ತಾನು ಗೋವಿಂದಪುರ ಠಾಣೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಪೊಲೀಸ್ ಪ್ರೊಸೀಜರ್‌ಗಳನ್ನು ಚೆನ್ನಾಗಿ ತಿಳಿದು, ಹುಡುಗರಿಗೆ ದರೋಡೆಯ ತಂತ್ರಗಳನ್ನು ಕಲಿಸಿದ್ದಾನೆ. ಹೇಗೆ ದಾಳಿ ಮಾಡಬೇಕು, ಹೇಗೆ ತಪ್ಪಿಸಿಕೊಳ್ಳಬೇಕು, ಪೊಲೀಸ್ ಟ್ರ್ಯಾಕಿಂಗ್ ತಪ್ಪಿಸುವುದು ಹೇಗೆ ಎಂಬುದರಲ್ಲಿ ತರಬೇತಿ ನೀಡಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಗ್ಯಾಂಗ್‌ನಲ್ಲಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಿಂದ ಬಂದ ಹುಡುಗರು ಸೇರಿದ್ದಾರೆ. ಕಲ್ಯಾಣ್ ನಗರದಲ್ಲಿ ಕೆಲವರು ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಎಂಎಸ್ ಮಾಜಿ ಉದ್ಯೋಗಿಯೊಬ್ಬರು ಇದರಲ್ಲಿ ಪಾತ್ರ ವಹಿಸಿದ್ದು, ವ್ಯಾನ್‌ನ ರೂಟ್ ಮತ್ತು ಸಮಯದ ಮಾಹಿತಿ ನೀಡಿದ್ದಾರೆ. ದರೋಡೆಗಾರರು ಆರ್‌ಬಿಐ ಅಧಿಕಾರಿಗಳಂತೆ ಬಟ್ಟೆ ಧರಿಸಿ, ಮಾರಕಸ್ತ್ರಗಳಿಂದ ವ್ಯಾನ್ ಸಿಬ್ಬಂದಿಗೆ ಬೆದರಿಕೆ ಹಾಕಿ ಹಣ ದೋಚಿದ್ದಾರೆ.
ಈ ದರೋಡೆಯು ವೆಬ್ ಸೀರೀಸ್‌ನಿಂದ ಪ್ರೇರಣೆ ಪಡೆದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದ್ದು, ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ. ದರೋಡೆಗಾರರು ಡೈರಿ ಸರ್ಕಲ್ ಬಳಿ ಸಿಬ್ಬಂದಿಯನ್ನು ಬಿಟ್ಟುಬಿಟ್ಟು, ವ್ಯಾನ್‌ನ್ನು ಹೊಸೂರು ರಸ್ತೆಯಲ್ಲಿ ತೊರೆದುಹೋಗಿದ್ದರು. ಈಗ ಆರೋಪಿಗಳ ವಿಚಾರಣೆಯಿಂದ ಹೊಸ ಸಾಕ್ಷ್ಯಗಳು ಬಹಿರಂಗವಾಗುತ್ತಿವೆ.





