ಬಳ್ಳಾರಿ, ಜನವರಿ 02, 2026: ಬಳ್ಳಾರಿಯ ಬ್ಯಾನರ್ ವಿವಾದ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಗುರುವಾರ ರಾತ್ರಿ ನಡೆದ ಘರ್ಷಣೆ ಕುರಿತು ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ, ಆಡಳಿತ ಪಕ್ಷದ ವಿರುದ್ಧ ಕೆಂಡಕಾರಿದ್ದಾರೆ. ನಿನ್ನೆ ನಡೆದದ್ದು ಆಕಸ್ಮಿಕವಲ್ಲ, ಅದು ಜನಾರ್ದನ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು ನಡೆಸಿದ ಪೂರ್ವನಿಯೋಜಿತ ಕೃತ್ಯ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಜನಾರ್ದನ ರೆಡ್ಡಿ ಮೇಲೆಯೇ ಗುಂಡು ಹಾರಿಸಲಾಯಿತು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ಬ್ಯಾನರ್ ಕಟ್ಟುವ ವಿಚಾರದಲ್ಲಿ ಜಗಳ ಮಾಡಲೆಂದೇ ಒಂದು ಗುಂಪು ಪ್ಲಾನ್ ಮಾಡಿಕೊಂಡು ಬಂದಿತ್ತು. ಜನಾರ್ದನ ರೆಡ್ಡಿ ಅವರು ಸ್ಥಳಕ್ಕೆ ಬರುತ್ತಿದ್ದಂತೆಯೇ ಅವರ ಮೇಲೆ ಗುಂಡು ಹಾರಿಸಲಾಗಿದೆ. ಸತೀಶ್ ರೆಡ್ಡಿ ಎಂಬುವವರ ಬಾಡಿಗಾರ್ಡ್‌ಗಳು ಸಿನಿಮಾದಲ್ಲಿ ತೋರಿಸುವಂತೆ ಮನಬಂದಂತೆ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಪೆಟ್ರೋಲ್ ಬಾಂಬ್ ಕೂಡ ಎಸೆಯಲಾಗಿದೆ ಎಂದು ಆರೋಪಿಸಿದರು. 1982ರ ನಂತರ ಬಳ್ಳಾರಿಯಲ್ಲಿ ಇಂತಹ ಭೀಕರ ಗೂಂಡಾಗಿರಿ ನಡೆದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಪ್ರಕರಣದಲ್ಲಿ ರಾಜಶೇಖರ್ ಎಂಬ ಯುವಕನ ಸಾವಿಗೆ ತೀವ್ರ ಸಂತಾಪ ಸೂಚಿಸಿದ ಶ್ರೀರಾಮುಲು, ರಾಜಶೇಖರ್ ಯಾವುದೇ ಪಕ್ಷಕ್ಕೆ ಸೇರಿರಲಿ, ಆತ ಒಬ್ಬ ಅಮಾಯಕ. ಆತನ ಸಾವು ನೋವು ತಂದಿದೆ. ಆದರೆ, ಆತನಿಗೆ ತಗುಲಿರುವುದು ಪೊಲೀಸರ ಬುಲೆಟ್ ಅಲ್ಲ, ಬದಲಾಗಿ ಖಾಸಗಿ ವ್ಯಕ್ತಿಯ ರಿವಾಲ್ವರ್ ಗುಂಡು. ಪೊಲೀಸರು ಕೂಡಲೇ ಬ್ಯಾಲಿಸ್ಟಿಕ್ ತನಿಖೆ (FSL) ನಡೆಸಿ, ಯಾವ ಗನ್‌ನಿಂದ ಗುಂಡು ಹಾರಿದೆ ಎಂಬುದನ್ನು ಪತ್ತೆಹಚ್ಚಬೇಕು. ನಮ್ಮ ಗನ್‌ಮ್ಯಾನ್ ಬಳಿಯ ಬುಲೆಟ್‌ಗಳನ್ನು ಬೇಕಾದರೆ ಲೆಕ್ಕ ಮಾಡಲಿ, ನಾವು ತನಿಖೆಗೆ ಸಿದ್ಧವಿದ್ದೇವೆ ಎಂದರು.
ಶಾಸಕ ನಾರಾ ಭರತ್ ರೆಡ್ಡಿ ಅವರ ಹೆಸರನ್ನು ಉಲ್ಲೇಖಿಸಿ ಮಾತನಾಡಿದ ರಾಮುಲು, ಬಳ್ಳಾರಿಯನ್ನು ಭಸ್ಮ ಮಾಡುತ್ತೇನೆ ಎಂದು ಭರತ್ ರೆಡ್ಡಿ ಹೇಳಿದ್ದಾರೆ. ಪೆಟ್ರೋಲ್ ಬಾಂಬ್ ಅವರೇ ತಂದಿದ್ದು ಎಂಬುದಕ್ಕೆ ಅವರ ಮಾತುಗಳೇ ಸಾಕ್ಷಿ. ಸತೀಶ್ ರೆಡ್ಡಿ ಎಂಬುವವರು ಬಿಹಾರ ಮಾದರಿಯಲ್ಲಿ ಗನ್ ಹಿಡಿದು ದೌರ್ಜನ್ಯ ಮಾಡುತ್ತಿದ್ದಾರೆ. ಇಷ್ಟು ಸ್ಪೀಡ್ ಒಳ್ಳೆಯದಲ್ಲ ಭರತ್ ರೆಡ್ಡಿ, ಆಕ್ಸಿಡೆಂಟ್ ಆಗುತ್ತೆ ಎಂದು ಎಚ್ಚರಿಕೆ ನೀಡಿದರು. ಕೇವಲ ಚುನಾವಣೆಗಾಗಿ ಶಕ್ತಿ ಪ್ರದರ್ಶನ ಇರಲಿ, ಇಂತಹ ರೌಡಿಸಂ ಬೇಡ ಎಂದು ಗುಡುಗಿದರು.
ಪ್ರಕರಣದ ಸತ್ಯಾಸತ್ಯತೆ ಹೊರಬರಲು ರಾಜ್ಯ ಸರ್ಕಾರದ ತನಿಖೆಯ ಮೇಲೆ ನಮಗೆ ನಂಬಿಕೆಯಿಲ್ಲ. ಆದ್ದರಿಂದ ಈ ಪ್ರಕರಣವನ್ನು ಸಿಟ್ಟಿಂಗ್ ಹೈಕೋರ್ಟ್ ನ್ಯಾಯಾಧೀಶರಿಂದ ಅಥವಾ ಸಿಬಿಐ (CBI) ತನಿಖೆಗೆ ವಹಿಸಬೇಕು ಎಂದು ಶ್ರೀರಾಮುಲು ಒತ್ತಾಯಿಸಿದರು. ನಾವು ಎಲ್ಲಿಯೂ ಓಡಿ ಹೋಗಲ್ಲ, ನಿರೀಕ್ಷಣಾ ಜಾಮೀನು ಪಡೆಯಲ್ಲ. ನಮ್ಮ ಕಡೆಯಿಂದ ಒಂದು ಸಣ್ಣ ತಪ್ಪೂ ನಡೆದಿಲ್ಲ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ಅವರು ಸವಾಲು ಹಾಕಿದರು. ಸದ್ಯ ಬಳ್ಳಾರಿಯಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು, ಶ್ರೀರಾಮುಲು ಅವರ ಈ ಆರೋಪಗಳು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ.





