ಬೆಂಗಳೂರು, ಸೆಪ್ಟೆಂಬರ್ 1: ಸಿಲಿಕಾನ್ ಸಿಟಿ ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ಸಂಭವಿಸುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಆಡಳಿತ ಸೆಪ್ಟೆಂಬರ್ 1ರೊಂದಿಗೆ ಕೊನೆಗೊಂಡು, ಸೆಪ್ಟೆಂಬರ್ 2ರಿಂದ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಜಾರಿಗೆ ಬರಲಿದೆ.
ಈ ಹೊಸ ವ್ಯವಸ್ಥೆಯಡಿ ಬಿಬಿಎಂಪಿ ಐದು ಸ್ವತಂತ್ರ ಮಹಾನಗರ ಪಾಲಿಕೆಗಳಾಗಿ ವಿಭಜನೆಯಾಗಲಿದ್ದು, ಇವು ಬೆಂಗಳೂರು ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ ಮತ್ತು ಕೇಂದ್ರ ಪಾಲಿಕೆಗಳಾಗಿವೆ. ಕರ್ನಾಟಕ ಸರ್ಕಾರದ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024 ಅನ್ವಯ ಈ ಬದಲಾವಣೆ ಜಾರಿಯಾಗುತ್ತಿದೆ. ಈಗಾಗಲೇ ತಿದ್ದುಪಡಿ ವಿಧೇಯಕ ಅನುಮೋದನೆಗೊಂಡಿದ್ದು, ಕಳೆದ ತಿಂಗಳು ಐದು ಪಾಲಿಕೆಗಳ ರಚನೆಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಲಾಗಿದೆ. ಆಗಸ್ಟ್ 18ರವರೆಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿತ್ತು.
ಐದು ಪಾಲಿಕೆಗಳಿಗೆ ಹೊಸ ಆಯುಕ್ತರ ನೇಮಕವಾಗಲಿದ್ದು, ಪ್ರತಿ ಪಾಲಿಕೆಗೆ ಎರಡು ವಲಯಗಳು, ಒಟ್ಟು 10 ವಲಯಗಳ ರಚನೆಯಾಗಲಿದೆ. ಪೂರ್ವ ಮತ್ತು ಪಶ್ಚಿಮ ಪಾಲಿಕೆಗಳು ದೊಡ್ಡದಾಗಿದ್ದು, ಇವುಗಳಲ್ಲಿ ವಲಯಗಳ ಸಂಖ್ಯೆ ಹೆಚ್ಚಾಗಬಹುದು. ಜಿಬಿಎಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿ, ಬೆಂಗಳೂರು ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ.
ಹಾಲಿ ಮೇಯರ್ ಕಚೇರಿ ಜಿಬಿಎ ಅಧ್ಯಕ್ಷರ ಕಚೇರಿಯಾಗಿ, ಡೆಪ್ಯೂಟಿ ಮೇಯರ್ ಕಚೇರಿ ಉಪಾಧ್ಯಕ್ಷರ ಕಚೇರಿಯಾಗಿ ಮಾರ್ಪಾಡಾಗಲಿದೆ. ಬಿಬಿಎಂಪಿ ಆಯುಕ್ತರು ಜಿಬಿಎ ಮುಖ್ಯ ಆಯುಕ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹೊಸ ಆಡಳಿತ ವ್ಯವಸ್ಥೆಯಿಂದ ಬೆಂಗಳೂರಿನ ಆಡಳಿತ ಸುಧಾರಣೆಗೆ ಕ್ರಾಂತಿಕಾರಕ ಹೆಜ್ಜೆಯಾಗಲಿದೆ.
ಐದು ಪಾಲಿಕೆ ಹೊಸ ಕಚೇರಿಗಳು ಎಲ್ಲೆಲ್ಲಿ..?
ಬೆಂಗಳೂರು ಉತ್ತರ-ಯಲಹಂಕ ತಾಲೂಕು ಕಚೇರಿ ಅನೆಕ್ಸ್ ಬಿಲ್ಡಿಂಗ್
ಬೆಂಗಳೂರು ದಕ್ಷಿಣ-ಜಯನಗರದ ದಕ್ಷಿಣ ವಲಯ ಕಚೇರಿ
ಬೆಂಗಳೂರು ಪೂರ್ವ-ಎಂ.ಜಿ. ರಸ್ತೆಯ ಯುಟಿಲಿಟಿ ಬಿಲ್ಡಿಂಗ್
ಬೆಂಗಳೂರು ಪಶ್ಚಿಮ-ಗೋವಿಂದರಾಜ ನಗರದ ಕನಕ ಭವನ
ಬೆಂಗಳೂರು ಕೇಂದ್ರ-ಬಿಬಿಎಂಪಿ ಕೇಂದ್ರ ಕಚೇರಿ ಅನೆಕ್ಸ್ ಬಿಲ್ಡಿಂಗ್
ಬಿಬಿಎಂಪಿ ಐದು ಪಾಲಿಕೆ ವಿಂಗಡನೆಯಲ್ಲಿ ತಾರತಮ್ಯ
ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಅಡಿಯಲ್ಲಿ ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ವಿಭಜಿಸುವ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜನಸಂಖ್ಯೆಯ ಪ್ರಮಾಣದಲ್ಲಿ ತಾರತಮ್ಯ, ಅವೈಜ್ಞಾನಿಕ ರಚನೆ ಮತ್ತು ಬೆಂಗಳೂರಿನ ಮೂಲ ನಿವಾಸಿಗಳ ಕಡೆಗಣನೆಯ ಆರೋಪಗಳು ಕೇಳಿಬಂದಿವೆ. ಐದು ಪಾಲಿಕೆಗಳಿಂದ ತೆರಿಗೆ ಸಂಗ್ರಹದಲ್ಲಿ ಅಸಮಾನತೆ, ಶಾಸಕರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗುವ ಆತಂಕವಿದೆ.
ನವದೆಹಲಿಯ ಉದಾಹರಣೆಯಂತೆ, ಮೂರು ಪಾಲಿಕೆ ರಚನೆಯಿಂದ ಆರ್ಥಿಕ ಅಸಮತೋಲನ, ರಿಯಲ್ ಎಸ್ಟೇಟ್ ಸಮಸ್ಯೆ ಮತ್ತು ನಿರುದ್ಯೋಗ ಉಂಟಾಗಿತ್ತು. ಇದರಿಂದಾಗಿ ದೆಹಲಿಯಲ್ಲಿ ಮೂರು ಪಾಲಿಕೆಗಳನ್ನು ಮತ್ತೆ ಒಂದಾಗಿಸಲಾಯಿತು. ಬೆಂಗಳೂರಿನ ಐದು ಪಾಲಿಕೆ ರಚನೆಯಿಂದ ಲಂಡನ್‌ನಂತಹ ಮಹಾನಗರಗಳ ರೀತಿಯ ಸಮಸ್ಯೆಗಳು ಎದುರಾಗಬಹುದು ಎಂದು ಆತಂಕವಿದೆ. ಪಾಲಿಕೆ ಸದಸ್ಯರ ನಡುವೆ ಸಂಘರ್ಷ, ಯೋಜನೆಗಳ ಅನುಷ್ಠಾನದಲ್ಲಿ ತಾರತಮ್ಯ ಮತ್ತು ಕಡಿಮೆ ಆದಾಯದ ಪಾಲಿಕೆಗಳಲ್ಲಿ ಅಭಿವೃದ್ಧಿ ಮರಿಚಿಕೆಯಾಗಬಹುದು.
ಜನಸಂಖ್ಯೆ ಪ್ರಮಾಣದಲ್ಲಿ ತಾರತಮ್ಯ..!
ಬೆಂಗಳೂರು ಉತ್ತರ- 19,04846
ಬೆಂಗಳೂರು ಪೂರ್ವ- 10,12655
ಬೆಂಗಳೂರು ಕೇಂದ್ರ-13,83596
ಬೆಂಗಳೂರು ಪಶ್ಚಿಮ- 26,98,119
ಬೆಂಗಳೂರು ದಕ್ಷಿಣ- 17,14,189
ಆದಾಯ ಹಂಚಿಕೆಯಲ್ಲೂ ತಾರತಮ್ಯ..!
ಬೆಂಗಳೂರು ಉತ್ತರ- ₹ 543 ಕೋಟಿ
ಬೆಂಗಳೂರು ಪೂರ್ವ- ₹912 ಕೋಟಿ
ಬೆಂಗಳೂರು ಕೇಂದ್ರ- ₹ 659 ಕೋಟಿ
ಬೆಂಗಳೂರು ಪಶ್ಚಿಮ- ₹ 580 ಕೋಟಿ
ಬೆಂಗಳೂರು ದಕ್ಷಿಣ- ₹ 733 ಕೋಟಿ
ಶಾಸಕರ ಹಂಚಿಕೆ ವಿವರ..!
ಬೆಂಗಳೂರು ಉತ್ತರ- 7 ಶಾಸಕರು
ಬೆಂಗಳೂರು ಪೂರ್ವ- 2 ಶಾಸಕರು
ಬೆಂಗಳೂರು ಕೇಂದ್ರ- 6 ಶಾಸಕರು
ಬೆಂಗಳೂರು ಪಶ್ಚಿಮ- 10 ಶಾಸಕರು
ಬೆಂಗಳೂರು ದಕ್ಷಿಣ- 7 ಶಾಸಕರು
ಪಾಲಿಕೆಗಳ ವಿಸ್ತೀರ್ಣದಲ್ಲೂ ತಾರತಮ್ಯ..!
ಬೆಂಗಳೂರು ಉತ್ತರ- 158 ಚದರ ಕಿಲೋ ಮೀಟರ್
ಬೆಂಗಳೂರು ಪೂರ್ವ- 168 ಚದರ ಕಿಲೋ ಮೀಟರ್
ಬೆಂಗಳೂರು ಕೇಂದ್ರ- 78 ಚದರ ಕಿಲೋ ಮೀಟರ್
ಬೆಂಗಳೂರು ಪಶ್ಚಿಮ- 161 ಚದರ ಕಿಲೋ ಮೀಟರ್
ಬೆಂಗಳೂರು ದಕ್ಷಿಣ-147 ಚದರ ಕಿಲೋ ಮೀಟರ್
ಯಾವ್ಯಾವ ಮಹಾನಗರಗಳಲ್ಲಿ ಎಷ್ಟೆಷ್ಟು ಜನಸಂಖ್ಯೆ?
ನವದೆಹಲಿ- 3,40,00,000 ಜನಸಂಖ್ಯೆ
ಮುಂಬೈ- 2,17,00,000 ಜನಂಸಂಖ್ಯೆ
ಕೊಲ್ಕತ್ತಾ- 1,56,00,000 ಜನಸಂಖ್ಯೆ
ಚೆನ್ನೈ- 1,22,00,000 ಜನಸಂಖ್ಯೆ
ಬೆಂಗಳೂರು- 1,40,00,000 ಜನಸಂಖ್ಯೆ
ಪ್ರಾದೇಶಿಕ ಅಸಮಾನತೆಗೆ ಕಾರಣ?
- ಕೇಂದ್ರ ಪಾಲಿಕೆ ಸಂಪೂರ್ಣ ಉರ್ದು ಮತ್ತು ತಮಿಳುಮಯ
- ಉತ್ತರ ಪಾಲಿಕೆ ಉರ್ದು ಮತ್ತು ತೆಲುಗುಮಯ
- ದಕ್ಷಿಣ ಪಾಲಿಕೆ ಉರ್ದು ಮತ್ತು ತೆಲುಗು ಭಾಗಶಃ ಕನ್ನಡ
- ಪೂರ್ವ ಪಾಲಿಕೆ ತೆಲುಗು ಮತ್ತು ಉತ್ತರ ಭಾರತೀಯ ಭಾಷಾಮಯ
- ಪಶ್ಚಿಮ ಪಾಲಿಕೆ ಕನ್ನಡಮಯ
ಈ ಹೊಸ ವ್ಯವಸ್ಥೆಯಿಂದ ಬೆಂಗಳೂರು ಹೇಗೆ ಬದಲಾಗಲಿದೆ ಎಂಬುದು ಕಾಲವೇ ಹೇಳಬೇಕು. ಆದರೆ ಸರ್ಕಾರದ ಪ್ರಕಾರ, ಇದು ನಗರದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ.