ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ ನಾಳೆ ಆರಂಭ: 7 ದಿನ ರಸ್ತೆ ಬಂದ್

Untitled design 2025 11 16T171554.337

ಬೆಂಗಳೂರು: ಬೆಂಗಳೂರಿನ ಬಸವನಗುಡಿ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕಡ್ಲೆಕಾಯಿ ಪರಿಷೆ ಭರ್ಜರಿಯಾಗಿ ನಡೆಯಲಿದೆ. ನವೆಂಬರ್ 17ರಿಂದ 21ರವರೆಗೆ ನಡೆಯುವ ಈ ಮಹೋತ್ಸವಕ್ಕೆ ನಗರದ ಜನತೆ ಕಾತುರದಿಂದ ಕಾಯುತ್ತಿದ್ದಾರೆ. 2024ರಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಬಾರಿ ಕೂಡ ಅದೇ ಸಂಖ್ಯೆಯ ಅಥವಾ ಅದಕ್ಕಿಂತ ಹೆಚ್ಚು ಜನರು ಆಗಮಿಸಲಿದ್ದಾರೆಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಪೊಲೀಸ್ ಇಲಾಖೆ ಮತ್ತು ಇತರ ಸಂಸ್ಥೆಗಳು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿವೆ.

ಬಸವನಗುಡಿ ದೊಡ್ಡ ಗಣಪತಿ ದೇವಾಲಯದ ಸುತ್ತಮುತ್ತ ಕಡ್ಲೆಕಾಯಿ ಮಾರಾಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಪರಿಷೆಯನ್ನು ಐದು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಅಧಿಕೃತ ಚಾಲನೆ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ. ವಿಶೇಷವೆಂದರೆ, ಐದು ಬಸವಣ್ಣಗಳನ್ನು ಅಲಂಕರಿಸಿ ದೇವಾಲಯಕ್ಕೆ ಕರೆತಂದು, ಅವುಗಳಿಗೆ ಹುಲ್ಲು ತಿನ್ನಿಸುವ ಮೂಲಕ ಮತ್ತು ವಿಶೇಷ ಪೂಜೆ ಸಲ್ಲಿಸುವ ಮೂಲಕ ಪರಿಷೆಗೆ ಶುಭಾರಂಭ ಮಾಡಲಾಗುವುದು.

ಪರಿಷೆ ಪ್ರದೇಶದಲ್ಲಿ ಹಲವು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸರು 24 ಗಂಟೆಗಳ ಕಾಲ ಕಟ್ಟೆಚ್ಚರ ವಹಿಸಲಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಇದಲ್ಲದೆ, ತುರ್ತು ವೈದ್ಯಕೀಯ ಸೌಲಭ್ಯಗಳು, ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳನ್ನು ಸಜ್ಜುಗೊಳಿಸಲಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ವ್ಯಾಪಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಬಿಬಿಎಂಪಿ ವತಿಯಿಂದ ಆರೋಗ್ಯ ಕೇಂದ್ರಗಳು, ಕಸ ನಿರ್ವಹಣೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪರಿಷೆ ಪ್ರದೇಶದಲ್ಲಿ ಆಕರ್ಷಕ ಲೈಟಿಂಗ್ ವ್ಯವಸ್ಥೆಯನ್ನು ಏರ್ಪಡಿಸಲಾಗುವುದು. 24 ಗಂಟೆಗಳ ಕಾಲ ಶೌಚಾಲಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು   ನೃತ್ಯ, ಸಂಗೀತ, ಮತ್ತು ಪ್ರದರ್ಶನಗಳು ನಡೆಯಲಿವೆ. ಈ ಬಾರಿ ಸುಂಕ ರಹಿತ ಮಳಿಗೆಗಳಿಗೆ ಅವಕಾಶ ನೀಡಲಾಗಿದ್ದು, ಸಣ್ಣ ವ್ಯಾಪಾರಿಗಳು ಮತ್ತು ರೈತರು ಕಡ್ಲೆಕಾಯಿ, ಇತರ ಉತ್ಪನ್ನಗಳನ್ನು ಮಾರಾಟ ಮಾಡಬಹುದು.

ಪರಿಷೆಯ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಗಳಿವೆ. ಬಸವನಗುಡಿ ದೊಡ್ಡ ಗಣಪತಿ ರಸ್ತೆಯನ್ನು ಸಂಪೂರ್ಣವಾಗಿ ಏಳು ದಿನಗಳ ಕಾಲ ಬಂದ್ ಮಾಡಲಾಗುತ್ತಿದೆ. ನಾಳೆ (ನವೆಂಬರ್ 17) ಬೆಳಗ್ಗೆಯಿಂದಲೇ ರಸ್ತೆ ಮುಚ್ಚಲಾಗುವುದು. ಇದರಿಂದ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸಬೇಕು. ಬಿಎಂಟಿಸಿ ಬಸ್‌ಗಳ ಮಾರ್ಗಗಳಲ್ಲಿ ಬದಲಾವಣೆಗಳಿರುವುದರಿಂದ ಮುಂಚಿತವಾಗಿ ತಿಳಿದುಕೊಳ್ಳಿ. ಸಂಚಾರ ಪೊಲೀಸರು ದಟ್ಟಣೆ ನಿಯಂತ್ರಣಕ್ಕೆ ವಿಶೇಷ ತಂಡಗಳನ್ನು ನಿಯೋಜಿಸಿದ್ದಾರೆ.

Exit mobile version