ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೂಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಪ್ರದೂಷ್ ಹೇಳಿಕೆಯನ್ನು ತಕ್ಷಣ ದಾಖಲಿಸದಂತೆ ಸೆಷನ್ಸ್ ಕೋರ್ಟ್ ಆದೇಶಿಸಿದ್ದು, ಆಗಸ್ಟ್ 18ರವರೆಗೆ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ತಡೆಹಿಡಿದಿದೆ. ಈ ಮೂಲಕ ನಟ ದರ್ಶನ್‌ಗೆ ಸದ್ಯಕ್ಕೆ ಒಂದು ವಾರದ ರಿಲೀಫ್ ಸಿಕ್ಕಂತಾಗಿದೆ.
ಪ್ರದೂಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ಹಷ್ಮತ್ ಪಾಷಾ, ಪ್ರದೂಷ್ ಹೇಳಿಕೆಯನ್ನು ತಕ್ಷಣ ದಾಖಲಿಸಬಾರದು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿದರು. ಈ ಅರ್ಜಿಯನ್ನು ಸೆಷನ್ಸ್ ಕೋರ್ಟ್ ಇಂದು ವಿಚಾರಣೆ ನಡೆಸಿತು.
ವಾದ ಮಂಡಿಸಿದ ಹಷ್ಮತ್ ಪಾಷಾ, ಈ ವಿಚಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶವಿದೆ. ಒಂದು ವೇಳೆ ಹೈಕೋರ್ಟ್ ಸೆಷನ್ಸ್ ಕೋರ್ಟ್ ನೀಡಿರುವ ಆದೇಶವನ್ನು ಎತ್ತಿಹಿಡಿದರೆ ನಂತರ ಮುಂದಿನ ಪ್ರಕ್ರಿಯೆಯನ್ನು ಮುಂದುವರಿಸಬಹುದು. ಹೀಗಾಗಿ ಸದ್ಯಕ್ಕೆ ಪ್ರದೂಷ್ ಅವರ ಹೇಳಿಕೆಯನ್ನು ದಾಖಲಿಸಬಾರದು ಎಂದು ಪ್ರಬಲವಾಗಿ ವಾದಿಸಿದರು.
ಇದಕ್ಕೆ ಪ್ರದೂಷ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ತಮ್ಮ ಕಕ್ಷಿದಾರರು ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ಪ್ರಾಸಿಕ್ಯೂಷನ್ ಕೂಡ ಇದಕ್ಕೆ ಸಮ್ಮತಿ ಸೂಚಿಸಿದೆ. ಹೀಗಾಗಿ ಯಾವುದೇ ವಿಳಂಬ ಮಾಡದೆ ಪ್ರದೂಷ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಎಂದು ವಾದಿಸಿದರು. ಆದರೆ ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯವು ದರ್ಶನ್ ಪರ ವಕೀಲರ ಮನವಿಯನ್ನು ಪುರಸ್ಕರಿಸಿ, ಆಗಸ್ಟ್ 18ರವರೆಗೆ ಪ್ರದೂಷ್ ಹೇಳಿಕೆ ದಾಖಲಿಸದಂತೆ ಸೂಚಿಸಿದೆ.
ಪ್ರದೂಷ್‌ಗೆ ಜೈಲಿನಲ್ಲಿ ಸೂಕ್ತ ಭದ್ರತೆಗೆ ಸೂಚನೆ
ಇದೇ ವೇಳೆ, ಪ್ರದೂಷ್ ಪರ ವಕೀಲ ದಿವಾಕರ್ ಅವರು ತಮ್ಮ ಕಕ್ಷಿದಾರನ ಸುರಕ್ಷತೆ ಬಗ್ಗೆಯೂ ನ್ಯಾಯಾಲಯದ ಗಮನ ಸೆಳೆದರು. ಪ್ರದೂಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿ ಜೀವಭಯವಿದೆ ಎಂದು ತಿಳಿಸಿದ ಅವರು, ಅವರಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ವಕೀಲರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಪ್ರದೂಷ್‌ಗೆ ಜೈಲಿನಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಸೂಚನೆ ನೀಡಿದೆ. ಅಲ್ಲದೆ, ಅವರನ್ನು ಪ್ರತ್ಯೇಕವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ದರ್ಶನ್, ಪವಿತ್ರಾ, ಪ್ರದೂಷ್
ಇಂದಿನ ವಿಚಾರಣೆಯ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಟ ದರ್ಶನ್, ಪವಿತ್ರಾಗೌಡ ಹಾಗೂ ಪ್ರದೂಷ್ ನ್ಯಾಯಾಲಯದ ಮುಂದೆ ಹಾಜರಾದರು. ಪ್ರಕರಣದ ವಿಚಾರಣೆ ವೇಳೆ ಪ್ರದೂಷ್ ಅವರ ಮಾಫಿ ಸಾಕ್ಷಿ ಅರ್ಜಿ ಪ್ರಮುಖ ಚರ್ಚೆಯ ವಿಷಯವಾಯಿತು. ಪ್ರದೂಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ಆಗಸ್ಟ್ 18ರವರೆಗೆ ತಡೆ ನೀಡಿರುವುದರಿಂದ ಪ್ರಕರಣದ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.
