ರಾಜಧಾನಿ ಬೆಂಗಳೂರಿನ ಕೆಲವು ಸ್ಟಾರ್ ಹೋಟೆಲ್‌ಗಳ ಅಡುಗೆ ಮನೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು, ಫಂಗಸ್ ಹಿಡಿದ ತರಕಾರಿಗಳು, ಕೊಳೆತ ಮಾಂಸ ಹಾಗೂ ಹಾಳಾದ ಹಾಲಿನ ಉತ್ಪನ್ನಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಹೋಟೆಲ್, ಪಬ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಿಗೆ ಆಹಾರ ಸಂಗ್ರಹಣೆ ಮತ್ತು ನಿರ್ವಹಣೆ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಶೇಷ ತಪಾಸಣಾ ಕಾರ್ಯಾಚರಣೆಯಲ್ಲಿ 60ಕ್ಕೂ ಹೆಚ್ಚು 3-ಸ್ಟಾರ್ ಹಾಗೂ 5-ಸ್ಟಾರ್ ಹೋಟೆಲ್‌ಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈ ವೇಳೆ 1,000 ಕೆಜಿಗೂ ಅಧಿಕ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ಹೋಟೆಲ್‌ಗಳ ಕಿಚನ್‌ಗಳಲ್ಲಿ ಅವಧಿ ಮೀರಿದ ಆಹಾರ, ಫಂಗಸ್ ಹಿಡಿದ ತರಕಾರಿ, ಹಾಳಾದ ಮಾಂಸ ಮತ್ತು ಹಾಲಿನ ಉತ್ಪನ್ನಗಳು ಪತ್ತೆಯಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಜನರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಆಹಾರ ದೊರೆಯುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಆಹಾರ ಇಲಾಖೆ ಇದೀಗ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆಹಾರ ಪದಾರ್ಥಗಳನ್ನು ನಿರ್ದಿಷ್ಟ ತಾಪಮಾನದಲ್ಲಿ ಸಂಗ್ರಹಿಸುವುದು ಸೇರಿದಂತೆ ಹಲವು ನಿಯಮಗಳನ್ನು ಹೋಟೆಲ್‌ಗಳು ಕಡ್ಡಾಯವಾಗಿ ಪಾಲಿಸಬೇಕಾಗಿದೆ.
ಹೊಸ ಮಾರ್ಗಸೂಚಿಯಲ್ಲಿ ಏನಿದೆ?
ಹೊಸ ನಿಯಮಗಳ ಪ್ರಕಾರ ಮಾಂಸಾಹಾರ ಪದಾರ್ಥಗಳನ್ನು 4 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು. ವೆಜ್ ಆಹಾರವನ್ನು 65 ಡಿಗ್ರಿ ಹಾಗೂ ನಾನ್‌ವೆಜ್ ಆಹಾರವನ್ನು 70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇರಿಸಬೇಕು. ಶೀತ ಆಹಾರವನ್ನು 5 ಡಿಗ್ರಿ ಹಾಗೂ ಫ್ರೋಜನ್ ಆಹಾರವನ್ನು ಮೈನಸ್ 18 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸುವುದು ಕಡ್ಡಾಯವಾಗಿದೆ.
ಅಡುಗೆಗೆ ಬಳಸುವ ಎಣ್ಣೆಯ ಗುಣಮಟ್ಟದ ಮೇಲೂ ಇಲಾಖೆ ನಿಗಾ ವಹಿಸಿದ್ದು, 25% TPC ಮೀರದ ಎಣ್ಣೆಯನ್ನು ಮಾತ್ರ ಆಹಾರ ತಯಾರಿಕೆಗೆ ಬಳಸುವಂತೆ ಸೂಚಿಸಲಾಗಿದೆ. ಕಚ್ಚಾ ಆಹಾರ, ಅರೆಬೆಂದ ಆಹಾರ ಹಾಗೂ ಸಂಪೂರ್ಣವಾಗಿ ಬೇಯಿಸಿದ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ವೆಜ್ ಮತ್ತು ನಾನ್‌ವೆಜ್ ಆಹಾರ ಪದಾರ್ಥಗಳ ಸಂಗ್ರಹಣೆ ಹಾಗೂ ನಿರ್ವಹಣೆಯನ್ನೂ ಪ್ರತ್ಯೇಕವಾಗಿ ಮಾಡಬೇಕು.
ಈಗಾಗಲೇ ತಯಾರಿಸಿದ ಆಹಾರವನ್ನು ಮತ್ತೆ ಬಿಸಿ ಮಾಡುವ ಸಂದರ್ಭದಲ್ಲಿ 75 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಬಳಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ ಹೋಟೆಲ್‌ಗಳು FSSAI ಅಂಗೀಕೃತ ಪ್ರಮಾಣಪತ್ರವನ್ನು ಗ್ರಾಹಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು.
ಅವಧಿ ಮೀರಿದ ಹಾಗೂ ಫಂಗಸ್ ಹಿಡಿದ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ನೀಡುವುದನ್ನು ತಡೆಯುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಹೋಟೆಲ್‌ಗಳ ವಿರುದ್ಧ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ತಪಾಸಣೆ ಹಾಗೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
