ನವದೆಹಲಿ: ಕರ್ನಾಟಕ ಬಿಜೆಪಿಯ ಪ್ರಭಾವಿ ಮತ್ತು ಬಂಡಾಯ ನಾಯಕ, ಇತ್ತೀಚೆಗಷ್ಟೇ ಪಕ್ಷದಿಂದ ಉಚ್ಛಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ನಾನು ಯಾರ ಮನೆ ಬಾಗಿಲಿಗೂ ಬಂದಿಲ್ಲ, ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವುದೇ ನಮ್ಮ ಮುಂದಿನ ಗುರಿ ಎಂದು ಗುಡುಗುವ ಮೂಲಕ ಕೇಸರಿ ಪಡೆಗೆ ನೇರ ಸವಾಲು ಹಾಕಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ನಾನು ದೆಹಲಿಗೆ ಬಂದಿರುವುದು ವೈಯಕ್ತಿಕ ವಿಚಾರಗಳಿಗಾಗಿ. ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಿ ಎಂದು ಹೈಕಮಾಂಡ್ ನಾಯಕರ ಕಾಲು ಹಿಡಿಯಲು ನಾನಿಲ್ಲಿಗೆ ಬಂದಿಲ್ಲ. ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯಿಂದ ಉಚ್ಛಾಟನೆಗೊಂಡ ನಂತರ ಅವರು ಹೈಕಮಾಂಡ್ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಈ ಮೂಲಕ ತೆರೆ ಎಳೆದಿದ್ದಾರೆ.
ರಾಜ್ಯ ಬಿಜೆಪಿಯ ನಾಯಕತ್ವದ ವಿರುದ್ಧ ಎಂದಿನಂತೆ ಗುಡುಗಿದ ಅವರು,ರಾಜ್ಯ ಬಿಜೆಪಿ ಈಗ ಒಂದು ಭ್ರಷ್ಟ ಕುಟುಂಬದ ಕೈಯಲ್ಲಿದೆ. ಆ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ಇರುವವರೆಗೂ ನಾನು ಬಿಜೆಪಿಯತ್ತ ಮುಖ ಮಾಡುವುದಿಲ್ಲ. ಪಕ್ಷವನ್ನು ಉಳಿಸುವ ಹೆಸರಿನಲ್ಲಿ ಲೂಟಿ ಮಾಡುತ್ತಿರುವವರ ಜೊತೆ ನಾನು ಕೈಜೋಡಿಸುವುದಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಹೆಸರನ್ನು ಉಲ್ಲೇಖಿಸದೆ ತೀವ್ರವಾಗಿ ಟೀಕಿಸಿದರು.
ಇದೇ ವೇಳೆ ಕರ್ನಾಟಕದಲ್ಲಿ ಹೊಸ ಪ್ರಾದೇಶಿಕ ಪಕ್ಷ ಕಟ್ಟುವ ಬಗ್ಗೆ ಯತ್ನಾಳ್ ಅಧಿಕೃತವಾಗಿ ಸುಳಿವು ನೀಡಿದ್ದಾರೆ. ನಾವು ರಾಜ್ಯದಲ್ಲಿ ಹೊಸ ಪಕ್ಷವನ್ನು ಕಟ್ಟುತ್ತೇವೆ. ಅದು ಕೇವಲ ಚುನಾವಣೆಗೆ ಸ್ಪರ್ಧಿಸುವುದಕ್ಕಷ್ಟೇ ಅಲ್ಲ, ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ನಂಬಿಕೆ ನನಗಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಭವಿಷ್ಯ ನುಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ಗಟ್ಟಿಯಾದ ಹಿಡಿತ ಹೊಂದಿರುವ ಯತ್ನಾಳ್ ಅವರ ಈ ಹೇಳಿಕೆ ಬಿಜೆಪಿ ವಲಯದಲ್ಲಿ ತಳಮಳ ಸೃಷ್ಟಿಸಿದೆ.
ಯತ್ನಾಳ್ ಅವರ ಈ ನಿರ್ಧಾರದಿಂದ ಬಿಜೆಪಿಯ ಮತಬ್ಯಾಂಕ್‌ಗೆ ಧಕ್ಕೆ ಉಂಟಾಗಲಿದೆಯೇ ಎಂಬ ಚರ್ಚೆ ಈಗ ಶುರುವಾಗಿದೆ. ಪಂಚಮಸಾಲಿ ಸಮುದಾಯದ ಪ್ರಬಲ ನಾಯಕರಾಗಿರುವ ಯತ್ನಾಳ್, ಹೊಸ ಪಕ್ಷ ಕಟ್ಟಿದರೆ ಅದು ರಾಜ್ಯದ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಸವಾಲಾಗುವ ಸಾಧ್ಯತೆಯಿದೆ.





