ರಸ್ತೆ ಮಧ್ಯೆ ಯುವತಿಯ ಜೊತೆ ಅನುಚಿತ ವರ್ತನೆ; ಯುವಕನ ಬಂಧನ

Untitled design 2025 05 01t132509.524

ವರದಿ: ಮೂರ್ತಿ,ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ

ಬೆಂಗಳೂರಿನ ಟಿ.ದಾಸರಹಳ್ಳಿ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಯುವತಿಯೊಬ್ಬರ ಮೇಲೆ ಯುವಕನೊಬ್ಬ ವಿಕೃತಿ ನಡತೆ ತೋರಿದ ಘಟನೆ ಬೆಳಕಿಗೆ ಬಂದಿದೆ. ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಯುವತಿ ಚಂದನ ಅವರನ್ನು, ವಿನೋದ್ ಎಂಬಾತ ರಸ್ತೆ ಮಧ್ಯೆ ಅಡ್ಡಗಟ್ಟಿ, ಇನ್‌ಸ್ಟಾಗ್ರಾಂ ಐಡಿ ಕೇಳಿ, ಕೈ ಮುಟ್ಟುವ ಮೂಲಕ ಅಸಭ್ಯ ವರ್ತನೆ ತೋರಿದ್ದಾನೆ.

ಘಟನೆ ವೇಳೆ ಚಂದನ ತಕ್ಷಣ ತಾಯಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ. ತಾಯಿ ಸ್ಥಳಕ್ಕೆ ಬರುವವರೆಗೂ ಯುವಕ ತನ್ನ ಕೃತ್ಯ ಮುಂದುವರಿಸಿದ್ದ. ಸ್ಥಳೀಯರು 112 ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ ಪರಿಣಾಮ ಪೊಲೀಸರು ಆಗಮಿಸಿ ಯುವತಿಯನ್ನು ರಕ್ಷಿಸಿದ್ದಾರೆ. ಈ ಗಲಾಟೆಯಲ್ಲಿ ಯುವತಿ ಎಳೆದಾಡಲ್ಪಟ್ಟ ಕಾರಣ ಸಣ್ಣಪುಟ್ಟ ಗಾಯಗಳಾಗಿ, ಅವರು ಸ್ಥಳೀಯ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಚಂದನ ನೀಡಿದ ದೂರು ಆಧಾರದ ಮೇಲೆ, ಯುವಕ ವಿನೋದ್‌ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ ಮತ್ತು ಅತ್ಯಾಚಾರ ಯತ್ನದ ಆರೋಪಗಳು ಕೇಳಿಬಂದಿವೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಹಾಗೂ ತನಿಖೆ ಮುಂದುವರಿಸಲಾಗಿದೆ.

ಈ ಘಟನೆ ಮತ್ತೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತ ಪ್ರಶ್ನೆಗಳನ್ನು ಎತ್ತಿದೆ. ಯುವತಿಯ ಸಮಯೋಚಿತ ಸ್ಪಂದನೆ ಹಾಗೂ ಪೊಲೀಸರ ತ್ವರಿತ ಹಸ್ತಕ್ಷೇಪದಿಂದ ದೊಡ್ಡ ಅನಾಹುತ ತಪ್ಪಿದರೂ, ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ಕಠಿಣ ಕ್ರಮಗಳ ಅಗತ್ಯವಿದೆ. ಮಹಿಳೆಯರು ಯಾವುದೇ ಬಾಧೆಯನ್ನ ಎದುರಿಸಿದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು.

Exit mobile version