ಕೋಲಾರ, ಸೆಪ್ಟೆಂಬರ್ 28: ಕೋಲಾರ ನಗರದ ಹೊರವಲಯದಲ್ಲಿ ಬೆಂಗಳೂರು-ತಿರುಪತಿ ರಾಷ್ಟ್ರೀಯ ಹೆದ್ದಾರಿ (NH-75)ಯಲ್ಲಿ ಶನಿವಾರ ತಡರಾತ್ರಿ ಸ್ಕೈವಾಕ್ ಕುಸಿದು ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಯಿಂದಾಗಿ ಸುಮಾರು 3 ಕಿಲೋಮೀಟರ್‌ಗೂ ಅಧಿಕ ಟ್ರಾಫಿಕ್ ಜಾಮ್ ಉಂಟಾಗಿ, ಸಂಚಾರ ದಟ್ಟಣೆಯಿಂದಾಗಿ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾದರು. ಕೊಂಡರಾಜನಹಳ್ಳಿ ಆಂಜನೇಯ ದೇವಸ್ಥಾನದ ಸಮೀಪ ಈ ಘಟನೆ ಸಂಭವಿಸಿದ್ದು, ಜಾರ್ಖಂಡ್ ರಾಜ್ಯದ ಟ್ರಕ್ ಒಂದು ಸೈವಾಕ್‌ಗೆ ಗುದ್ದಿದ ಪರಿಣಾಮವಾಗಿ ಇದು ಕುಸಿದು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ವಿವರ
ತಡರಾತ್ರಿ ಸುಮಾರು 1:30ರ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಜಾರ್ಖಂಡ್‌ನಿಂದ ಬಂದ ಭಾರಿ ಟ್ರಕ್, ಕೊಂಡರಾಜನಹಳ್ಳಿಯ ಆಂಜನೇಯ ದೇವಸ್ಥಾನದ ಬಳಿಯ ಸ್ಕೈವಾಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಡಿಕ್ಕಿಯ ತೀವ್ರತೆಗೆ ಸ್ಕೈವಾಕ್ ಮಧ್ಯಭಾಗದಲ್ಲಿ ತುಂಡಾಗಿ ಟ್ರಕ್ ಮೇಲೆಯೇ ಕುಸಿದಿದೆ. ಟ್ರಕ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.
ಸ್ಕೈವಾಕ್ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಬೆಂಗಳೂರಿನಿಂದ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ತೆರಳುವ ವಾಹನಗಳು ಗಂಟೆಗಟ್ಟಲೆ ದಟ್ಟಣೆಯಲ್ಲಿ ಸಿಲುಕಿಕೊಂಡವು. ಪ್ರಯಾಣಿಕರು, ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಪ್ರಯಾಣಿಸುತ್ತಿದ್ದವರು. ಸ್ಥಳೀಯ ಪೊಲೀಸರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಕುಸಿದ ಸೈವಾಕ್‌ನ ಭಾಗವನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದರು.
ಕುಸಿತದಿಂದಾಗಿ NH-75ರಲ್ಲಿ ಸುಮಾರು 3 ಕಿಲೋಮೀಟರ್‌ಗೂ ಅಧಿಕ ಉದ್ದದಲ್ಲಿ ವಾಹನಗಳ ಟ್ರಾಫಿಕ್ ಜಾಮ್ ಉಂಟಾಯಿತು. ಬೆಂಗಳೂರು, ತಿರುಪತಿ, ಚೆನ್ನೈ ಮತ್ತು ಇತರೆ ಪ್ರಮುಖ ನಗರಗಳಿಗೆ ತೆರಳುವ ಬಸ್‌ಗಳು, ಖಾಸಗಿ ವಾಹನಗಳು ಮತ್ತು ಟ್ರಕ್‌ಗಳು ಗಂಟೆಗಟ್ಟಲೆ ದಟ್ಟಣೆಯಲ್ಲಿ ಸಿಲುಕಿಕೊಂಡು ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಯಿತು.