ಬೆಂಗಳೂರು, ಅಕ್ಟೋಬರ್ 29: ಬೆಂಗಳೂರಿನ ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 28ರಂದು ಬೆಳಗ್ಗೆ 8:30ರ ಸುಮಾರಿಗೆ ಆಘಾತಕಾರಿ ಘಟನೆಯೊಂದು ನಡೆದಿದೆ. ಕಬೀರ್ ಎಂಬ ಯುವಕ ಚಪ್ಪಲಿ ಕಾಲಿನಲ್ಲಿ ದೇವಸ್ಥಾನಕ್ಕೆ ನುಗ್ಗಿ, ಗರ್ಭಗುಡಿಯ ದೇವರ ವಿಗ್ರಹವನ್ನು ಎಳೆದಾಡಿ, ಒದ್ದು ವಿಕೃತಿ ಮೆರೆದಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿ, ಮಾರತ್ತಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಬೀರ್ ಎಂಬಾತ ದೇವರ ಬೀಸನಹಳ್ಳಿಯಲ್ಲಿ ಚಪ್ಪಲಿ ಹೊಲಿಯುವ ಅಂಗಡಿ ನಡೆಸುತ್ತಿದ್ದ. ಆತ ವಿಶೇಷ ಚೇತನನೆಂದು ಹೇಳಲಾಗಿದ್ದು, ತಾನು ಬಾಂಗ್ಲಾದೇಶದಿಂದ ಬಂದವನೆಂದು ಸ್ಥಳೀಯರ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ. ಘಟನೆಯ ದಿನ, ಕಬೀರ್ ತನ್ನ ಧರ್ಮದ ಪರ ಘೋಷಣೆ ಕೂಗುತ್ತಾ ದೇವಸ್ಥಾನದ ಬಳಿ ಮೆಡಿಕಲ್ ಅಂಗಡಿಯ ಮುಂದೆ ಇರಿಸಿದ್ದ ಗಣಪತಿ ದೇವರ ಫೋಟೊಗೆ ಕೋಲಿನಿಂದ ಹೊಡೆದಿದ್ದ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದಾಗ, ಆತ ಸಮೀಪದ ದೇವಸ್ಥಾನದತ್ತ ಓಡಿದ್ದಾನೆ.
ದೇವಸ್ಥಾನದ ಬಳಿ ಕೂಗಾಡುತ್ತಾ, ಕಲ್ಲಿನಿಂದ ಗರಡುಗಂಬಕ್ಕೆ ಹೊಡೆದ ಕಬೀರ್, ಕೈಯಲ್ಲಿ ಆಯಿಲ್‌ನಂತಹ ವಸ್ತುವಿರುವ ಬಾಟಲಿಯನ್ನು ಹಿಡಿದಿದ್ದ. ಚಪ್ಪಲಿ ಕಾಲಿನಲ್ಲಿ ಗರ್ಭಗುಡಿಗೆ ನುಗ್ಗಿ, ದೇವರ ಮೂರ್ತಿಯನ್ನು ಎಳೆದಾಡಿ, ಒದ್ದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೂಡಲೇ ಜನರು ಒಟ್ಟಾಗಿ ಆರೋಪಿಯನ್ನು ಹಿಡಿದು, ಮರಕ್ಕೆ ಕಟ್ಟಿ ಥಳಿಸಿದರು. ನಂತರ, ಮಾರತ್ತಹಳ್ಳಿ ಪೊಲೀಸರಿಗೆ ಒಪ್ಪಿಸಲಾಯಿತು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿಯ ಬಳಿಯಿದ್ದ ಆಯಿಲ್ ಬಾಟಲಿ, ಚಪ್ಪಲಿ, ಮತ್ತು ಕಲ್ಲನ್ನು ವಶಪಡಿಸಿಕೊಂಡಿದ್ದಾರೆ. ಕಬೀರ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.





