ಬೆಂಗಳೂರು: ಸೀರೆ ಕದ್ದ ಒಬ್ಬ ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಒಬ್ಬ ಬಟ್ಟೆ ಅಂಗಡಿ ಮಾಲೀಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಉಮೇದ್ ರಾಮ್ ಎಂಬ ಈ ಬಂಧಿತನ ವಿರುದ್ಧ ಕೆ.ಆರ್. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.
ಘಟನೆಯ ವಿವರ
ಹಂಪಮ್ಮ ಎಂಬ ಮಹಿಳೆಯು 50ಕ್ಕೂ ಹೆಚ್ಚು ಸೀರೆಗಳನ್ನು ಕದ್ದಿದ್ದಾಳೆ ಎಂದು ಆರೋಪಿಸಿ, ಉಮೇದ್ ರಾಮ್ ತನ್ನ ಸಿಬ್ಬಂದಿಯೊಂದಿಗೆ ಆಕೆಗೆ ಒದ್ದು, ಶೂನಿಂದ ಗುಪ್ತಾಂಗಕ್ಕೆ ಒದ್ದು, ರಾಕ್ಷಸರಂತೆ ವರ್ತಿಸಿದ್ದಾನೆ. ಮಹಿಳೆ ನೋವಿನಿಂದ ಕಿರುಚುತ್ತಿದ್ದರೂ, ಯಾವುದೇ ಕರುಣೆ ತೋರದೆ, ಸಿಬ್ಬಂದಿಯು ಆಕೆಯನ್ನು ನಿರ್ದಯವಾಗಿ ಥಳಿಸಿದ್ದಾರೆ. ಈ ದೃಶ್ಯವನ್ನು ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆ.ಆರ್. ಮಾರ್ಕೆಟ್ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದೆ, ಮಹಿಳೆಯ ದೂರನ್ನು ದಾಖಲಿಸಿಕೊಳ್ಳದೆ, ಬದಲಿಗೆ ಆಕೆಯ ಮೇಲೆ ಕಳ್ಳತನದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ, ಪೊಲೀಸರ ನಿರ್ಲಕ್ಷ್ಯದ ವರ್ತನೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕಾನೂನನ್ನು ಕೈಗೆ ತೆಗೆದುಕೊಂಡು ಇಂತಹ ಕ್ರೌರ್ಯ ಮೆರೆಯುವುದು ಸರಿಯೇ?” ಎಂದು ಅನೇಕರು ಪ್ರಶ್ನಿಸಿದ್ದಾರೆ. ಕೆಲವರು, “ಕಳ್ಳತನ ಮಾಡಿದ್ದರೆ ಕಾನೂನಿನ ಮೂಲಕ ಶಿಕ್ಷೆ ನೀಡಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆ.ಆರ್. ಮಾರ್ಕೆಟ್ ಪೊಲೀಸರು ಆರೋಪಿ ಉಮೇದ್ ರಾಮ್‌ನನ್ನು ಬಂಧಿಸಿ, ತನಿಖೆಯನ್ನು ಆರಂಭಿಸಿದ್ದಾರೆ.





