ಬೆಂಗಳೂರು, ಆಗಸ್ಟ್ 13, 2025: ಶಾಲಾ ಬಸ್ ಧಗಧಗನೇ ಉರಿದು, ಅದರೊಳಗೆ ಒಬ್ಬ ವ್ಯಕ್ತಿಯ ಶವ ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆ ಬೆಂಗಳೂರಿನ ಬಾಣಸವಾಡಿಯ ಒಎಂಬಿಆರ್ ಲೇಔಟ್‌ನಲ್ಲಿ ತಡರಾತ್ರಿ ನಡೆದಿದೆ. ಈ ಘಟನೆಯ ಹಿಂದೆ ಕೊಲೆಯ ಶಂಕೆಯಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಬಾಣಸವಾಡಿಯ ಅಗ್ನಿಶಾಮಕ ಕಚೇರಿಯ ಸಮೀಪದಲ್ಲಿ ಕಳೆದ ಮೂರು-ನಾಲ್ಕು ತಿಂಗಳಿಂದ ಕೆಟ್ಟುಹೋಗಿ ನಿಂತಿದ್ದ ಈ ಶಾಲಾ ಬಸ್‌ನ್ನು ಮಾರಾಟಕ್ಕಾಗಿ ಇರಿಸಲಾಗಿತ್ತು. ಈ ಬಸ್‌ನ ಮಾಲಿಕನ ಮನೆ, ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಇದೆ. ಸ್ಥಳೀಯರ ಪ್ರಕಾರ, ಈ ಬಸ್ ರಾತ್ರಿಯ ವೇಳೆಯಲ್ಲಿ ಕೆಲವು ಪಡ್ಡೆ ಹುಡುಗರ ಅಡ್ಡೆಯಾಗಿತ್ತು. ಬಸ್‌ನ ಬಾಗಿಲನ್ನು ಎಷ್ಟೇ ಬಾರಿ ಲಾಕ್ ಮಾಡಿದರೂ, ಕೆಲವರು ಒಳಗೆ ನುಗ್ಗಿ ಕುಳಿತುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ 10:45ರ ಸುಮಾರಿಗೆ ಈ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಜ್ವಾಲೆಗಳು ದೊಡ್ಡದಾಗಿ ಕಾಣಿಸಿಕೊಂಡಾಗ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ, ಬಸ್‌ನೊಳಗೆ ಒಬ್ಬ ವ್ಯಕ್ತಿಯ ಶವ ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ.
ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಘಟನೆಯ ಹಿಂದೆ ದುಷ್ಕರ್ಮಿಗಳ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ರಾಮಮೂರ್ತಿ ನಗರ ಪೊಲೀಸರು ಈ ಘಟನೆಯನ್ನು ಅನುಮಾನಾಸ್ಪದ ಸಾವಿನ ಪ್ರಕರಣವೆಂದು ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಾಣಸವಾಡಿ ಪೊಲೀಸರು, ಘಟನೆಯ ಸ್ಥಳವನ್ನು ಪರಿಶೀಲಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಬಸ್‌ನ ಮಾಲಿಕನಿಂದಲೂ ಮಾಹಿತಿ ಕಲೆಹಾಕಲಾಗುತ್ತಿದೆ.