ಬೆಂಗಳೂರು: ನಗರದ ಹಲವು ಶಾಲೆಗಳು ಮತ್ತು ಕಾಲೇಜುಗಳನ್ನು ಬಾಂಬ್ ಬೆದರಿಕೆಯಿಂದ ನಡುಗಿಸಿದ್ದ ಹುಸಿ ಬಾಂಬ್ ಕರೆಗಳ ಕಿಂಗ್‌ಪಿನ್ ಲೇಡಿ ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿತೆ ಗುಜರಾತ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ರೆನೆ ಜೋಶಿಲ್ಡಾ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಮ್ ಪೊಲೀಸರ ಕಾರ್ಯಾಚರಣೆಯಲ್ಲಿ ಈ ಬಂಧನ ನಡೆದಿದೆ.
ಘಟನೆ ಹಿನ್ನೆಲೆ
ಜೂನ್ 14ರಂದು ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಪಬ್ಲಿಕ್ ಶಾಲೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಶಾಲಾ ಆಡಳಿತ ಮಂಡಳಿ ತಕ್ಷಣ ಪೊಲೀಸರಿಗೆ ದೂರು ನೀಡಿತ್ತು. ಪ್ರಕರಣವನ್ನು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡ ನಂತರ, ನಗರ ಪೊಲೀಸ್ ಆಯುಕ್ತರು ಇದನ್ನು ಉತ್ತರ ವಿಭಾಗದ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಿದರು. ಸೈಬರ್ ತಜ್ಞರು ತನಿಖೆ ಆರಂಭಿಸಿದಾಗ, ಬೆದರಿಕೆ ಸಂದೇಶಗಳು VPN (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಮತ್ತು ಇತರ ಇಂಟರ್ನೆಟ್ ತಂತ್ರಗಳ ಮೂಲಕ ಕಳುಹಿಸಲಾಗಿದ್ದವು ಎಂಬುದು ಬಯಲಾಯಿತು.
‘ಗೇಟ್ ಕೂಡ್’ ಎಂಬ ಅಪ್ಲಿಕೇಶನ್ ಮೂಲಕ ವರ್ಚುವಲ್ ಮೊಬೈಲ್ ನಂಬರ್‌ಗಳನ್ನು ಪಡೆದುಕೊಳ್ಳುತ್ತಿದ್ದಳು. ಇದರ ಜೊತೆಗೆ, ಸುಮಾರು 6ರಿಂದ 7 ವಾಟ್ಸಪ್ ಖಾತೆಗಳನ್ನು ನಿರ್ವಹಿಸುತ್ತಿದ್ದಳು. ಈ ಖಾತೆಗಳ ಮೂಲಕ ಬೆಂಗಳೂರಿನ ಕನಿಷ್ಠ 7 ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾಳೆ. ಆದರೆ ಆರೋಪಿತೆ ವಿರುದ್ಧ ಗುಜರಾತ್, ಮೈಸೂರು, ತಮಿಳುನಾಡಿನ ಚೆನ್ನೈ ನಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣ ದಾಖಲಾಗಿದೆ.





