ಬೆಂಗಳೂರು, ಫೆ.09: ಸಿಲಿಕಾನ್ ಸಿಟಿ ಬೆಂಗಳೂರು ಎಂದಾಕ್ಷಣ ಐಟಿ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು, ಮೀಟಿಂಗ್‌ಗಳು, ಡೀಲ್ಸ್ ನೆನಪಾಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಎಲ್ಲ ಚರ್ಚೆಗಳು ಕಚೇರಿಗಳಲ್ಲಿ ಅಲ್ಲ, ಬದಲಾಗಿ ಹೋಟೆಲ್‌ಗಳ ಟೇಬಲ್‌ಗಳ ಮೇಲೆ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಒಂದು ಕಪ್ ಕಾಫಿ ಅಥವಾ ಟೀ ಆರ್ಡರ್ ಮಾಡಿ ಗಂಟೆಗಟ್ಟಲೆ ಮಾತಾಡುತ್ತಾ ಕುಳಿತುಕೊಳ್ಳುವ ಟ್ರೆಂಡ್ ಈಗ ಹೋಟೆಲ್ ಮಾಲೀಕರಿಗೆ ತಲೆನೋವಾಗುತ್ತಿದೆ.
ಇತ್ತೀಚೆಗೆ ಬೆಂಗಳೂರಿನ ಒಂದು ಹೋಟೆಲ್ ಗೋಡೆಯ ಮೇಲೆ ಅಂಟಿಸಿದ್ದ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. “ಇಲ್ಲಿ ಯಾವುದೇ ಮೀಟಿಂಗ್‌ಗಳಿಗೆ ಅವಕಾಶವಿಲ್ಲ. ಒಂದು ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ಮೀಟಿಂಗ್ ನಡೆದರೆ ಪ್ರತಿ ಗಂಟೆಗೆ 1,000 ರೂ. ಶುಲ್ಕ ವಿಧಿಸಲಾಗುವುದು” ಎಂಬ ಎಚ್ಚರಿಕೆ ನೋಟಿಸ್ ಸಾರ್ವಜನಿಕರ ಗಮನ ಸೆಳೆದಿತ್ತು.
ಬೆಂಗಳೂರು ನಗರದಲ್ಲಿ ಐದು ನಕ್ಷತ್ರ ಹೋಟೆಲ್‌ಗಳಿಂದ ಹಿಡಿದು ಸಣ್ಣ ಪುಟ್ಟ ಹೋಟೆಲ್‌ಗಳವರೆಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಇವುಗಳಲ್ಲಿ ಬಹುತೇಕ ಸಣ್ಣ ಮತ್ತು ಮಧ್ಯಮ ವರ್ಗದ ಹೋಟೆಲ್‌ಗಳು ಕೇವಲ ಊಟ-ಉಪಹಾರ ಸೇವನೆಗೆ ಸೀಮಿತವಾಗದೇ, ಈಗ ಮೀಟಿಂಗ್ ಸ್ಪಾಟ್‌ಗಳಾಗಿ ಪರಿವರ್ತನೆಗೊಂಡಿವೆ. ರಾಜಕೀಯ ಚರ್ಚೆಗಳು, ಭೂ ವ್ಯವಹಾರ, ರಿಯಲ್ ಎಸ್ಟೇಟ್ ಡೀಲ್ಸ್, ಮದುವೆ ಮಾತುಕತೆಗಳು, ಆಫೀಸ್ ಮೀಟಿಂಗ್‌ಗಳು ಎಲ್ಲವೂ ಇಲ್ಲಿ ನಡೆಯುತ್ತಿವೆ.
ಹೋಟೆಲ್ ಮಾಲೀಕರ ಪ್ರಕಾರ, ಕೆಲ ಗ್ರಾಹಕರು ಒಂದು ಕಾಫಿ ಹಿಡಿದುಕೊಂಡು 2-3 ಗಂಟೆಗಳ ಕಾಲ ಟೇಬಲ್ ನಲ್ಲಿ ಕುಳಿತ್ತಿರುತ್ತಾರೆ. ಇದರಿಂದ ಪೀಕ್ ಅವರ್‌ಗಳಲ್ಲಿ ಬರುವ ನಿಜವಾದ ಊಟಕ್ಕೆ ಬಂದ ಗ್ರಾಹಕರಿಗೆ ಕುಳಿತುಕೊಳ್ಳಲು ಜಾಗ ಸಿಗುವುದಿಲ್ಲ. ಕೆಲವರು ಜಾಗ ಇಲ್ಲದೆ ವಾಪಸ್ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಹೋಟೆಲ್‌ಗಳ ವ್ಯಾಪಾರಕ್ಕೂ ನಷ್ಟವಾಗುತ್ತಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹಲವು ಹೋಟೆಲ್ ಮಾಲೀಕರು ಬೃಹತ್ ಬೆಂಗಳೂರು ಹೋಟೆಲ್ ಸಂಘಕ್ಕೆ ದೂರು ಸಲ್ಲಿಸಿದ್ದಾರೆ. “ಹೋಟೆಲ್‌ಗಳು ಕಚೇರಿಗಳಲ್ಲ, ಸಹಭೋಜನದ ಸ್ಥಳಗಳು. ಮೀಟಿಂಗ್‌ಗಳಿಗೆ ಪ್ರತ್ಯೇಕ ಸ್ಥಳಗಳಿವೆ. ಆದರೆ ಗ್ರಾಹಕರು ಅದನ್ನು ಬಳಸದೆ ಹೋಟೆಲ್‌ಗಳಲ್ಲಿ ಗಂಟೆಗಟ್ಟಲೆ ಕುಳಿತರೆ ನಾವು ಏನು ಮಾಡಬೇಕು?” ಎಂಬ ಪ್ರಶ್ನೆಯನ್ನು ಸಂಘದ ಮುಂದೆ ಇಟ್ಟಿದ್ದಾರೆ.
ಐದು ನಕ್ಷತ್ರ ಹೋಟೆಲ್‌ಗಳಲ್ಲಿ ಈಗಾಗಲೇ ಲಾಬಿಯಲ್ಲಿ ಕುಳಿತುಕೊಳ್ಳಲು ಗಂಟೆಗಟ್ಟಲೆ ಶುಲ್ಕ ವಿಧಿಸುವ ವ್ಯವಸ್ಥೆ ಇದೆ. ಜೊತೆಗೆ ಕನಿಷ್ಠ ಆಹಾರ ಆರ್ಡರ್ ಮಾಡುವುದು ಕಡ್ಡಾಯ. ಇದೇ ಮಾದರಿಯನ್ನು ಸಣ್ಣ ಹಾಗೂ ಮಧ್ಯಮ ವರ್ಗದ ಹೋಟೆಲ್‌ಗಳಲ್ಲೂ ಅಳವಡಿಸುವ ಕುರಿತು ಚರ್ಚೆ ನಡೆಯುತ್ತಿದೆ. ಪಾರ್ಕಿಂಗ್ ಚಾರ್ಜ್‌ನಂತೆ ‘ಟೇಬಲ್ ಚಾರ್ಜ್’ ಪರಿಚಯಿಸುವುದಕ್ಕೆ ಸಲಹೆಗಳು ಕೇಳಿಬರುತ್ತಿವೆ.
ಈ ಹೊಸ ವ್ಯವಸ್ಥೆಯಡಿ ಟೀ, ಕಾಫಿ, ಉಪಹಾರ ಅಥವಾ ಊಟಕ್ಕೆ ನಿಗದಿತ ಸಮಯ ನೀಡುವುದು, ಆ ಸಮಯ ಮೀರಿದರೆ ಹೆಚ್ಚುವರಿ ಶುಲ್ಕ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ. ಇದರಿಂದ ಹೋಟೆಲ್‌ಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಹಾಗೂ ನಿಜವಾದ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂಬುದು ಸಂಘದ ಅಭಿಪ್ರಾಯ.





