ಬೆಂಗಳೂರು: ದೇಶಾದ್ಯಂತ ಅಪಾರ ಬೇಡಿಕೆ ಮತ್ತು ಹೆಚ್ಚಿನ ಬೆಲೆ ಹೊಂದಿರುವ, ರಕ್ತಚಂದನದ ಅಕ್ರಮ ಸಾಗಾಟ ಮತ್ತು ಮಾರಾಟದ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ನಗರದ ಹುಳಿಮಾವು (Hulimavu) ಮತ್ತು ಆರ್.ಟಿ ನಗರ (R.T. Nagar) ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಟ್ಟು 1,889 ಕೆ.ಜಿ ರಕ್ತಚಂದನವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಒಟ್ಟು ಮೌಲ್ಯ ₹1.35 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಅಕ್ರಮ ಸಾಗಾಟದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಈ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿತರಾದ ನಾಲ್ವರ ಪೈಕಿ, ಇಬ್ಬರು ಉನ್ನತ ಶಿಕ್ಷಣ ಪಡೆದವರು ಎಂಬುದು ಆಶ್ಚರ್ಯದ ಸಂಗತಿಯಾಗಿದೆ.
ಆರ್.ಟಿ ನಗರದಲ್ಲಿ ಅರೆಸ್ಟ್ ಆದ ಆರೋಪಿಗಳು, ವರಪ್ರಸಾದ್ ರೆಡ್ಡಿ, ರಾಜ್‌ಶೇಖರ್ ಇವರು ಮೂಲತಃ ಆಂದ್ರಪ್ರದೇಶದ ಅಣ್ಯಮಯ್ಯ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರಾದ ವರಪ್ರಸಾದ್ ರೆಡ್ಡಿ ಮತ್ತು ರಾಜ್‌ಶೇಖರ್ ಅವರಲ್ಲಿ ಓರ್ವ ಬಿ.ಇ (B.E.) ಪದವಿ ಪಡೆದಿದ್ದರೆ, ಇನ್ನೊಬ್ಬ ಎಂಬಿಎ (M.B.A.) ಪದವೀಧರನಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನೂ ಹುಳಿಮಾವಿನಲ್ಲಿ ಅರೆಸ್ಟ್ ಆದ ಇಬ್ಬರು ಆರೋಪಿಗಳ ಗುರುತು ಇನ್ನೂ ತಿಳಿದು ಬರಬೇಕಿದೆ.
ಹುಳಿಮಾವಿನಲ್ಲಿ 1,150 ಕೆಜಿ ವಶ
ಮೊದಲ ಪ್ರಕರಣವು ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿ ರಕ್ತಚಂದನವನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ವಿಶಿಷ್ಟ ಮಾರ್ಗವನ್ನು ಅನುಸರಿಸಿದ್ದರು. ಅದೇಂನೆಂದರೆ ಅವರು ಪ್ರಯಾಣಿಸುತ್ತಿದ್ದ ಕಾರಿನ ಹಿಂಬದಿ ಸೀಟುಗಳನ್ನು ತೆಗೆದು, ಅದರ ಕೆಳಭಾಗದಲ್ಲಿ ರಕ್ತಚಂದನದ ತುಂಡುಗಳನ್ನು ಜೋಡಿಸಿಟ್ಟಿದ್ದರು.
ಈ ರಕ್ತಚಂದನವನ್ನು ಮಾರಾಟ ಮಾಡಲು ತಮಿಳುನಾಡು ಕಡೆಗೆ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಹುಳಿಮಾವು ಪೊಲೀಸರು ಕಾರನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದರು. ಈ ವೇಳೆ, 60 ಲಕ್ಷ ರೂ. ಮೌಲ್ಯದ 1,150 ಕೆಜಿ ರಕ್ತಚಂದನ ಪತ್ತೆಯಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆರ್.ಟಿ ನಗರದಲ್ಲಿ 739 ಕೆಜಿ ವಶ
ಎರಡನೇ ಕಾರ್ಯಾಚರಣೆ ಆರ್.ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 29 ರಂದು ನಡೆದಿದೆ. ಉನ್ನತ ಶಿಕ್ಷಣ ಪಡೆದಿದ್ದ ಇಬ್ಬರು ಆಂಧ್ರಪ್ರದೇಶದ ಆರೋಪಿಗಳು ಇಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರೋಪಿಗಳು ಬೊಲೆರೋ ವಾಹನದಲ್ಲಿ ರಕ್ತಚಂದನವನ್ನು ಸಾಗಿಸುತ್ತಿದ್ದರು. ಚೆಕ್‌ಪೋಸ್ಟ್‌ಗಳನ್ನು ತಪ್ಪಿಸಿ ಅಕ್ರಮವಾಗಿ ಗಡಿಯಾಚೆಗೆ ರವಾನೆ ಮಾಡಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದರು.
ಆರ್.ಟಿ ನಗರ ಪೊಲೀಸರ ತಪಾಸಣೆ ವೇಳೆ, ಸುಮಾರು 75 ಲಕ್ಷ ರೂ. ಮೌಲ್ಯದ 7 ಅಡಿ ಉದ್ದದ 50 ರಕ್ತಚಂದನ ಪೀಸ್‌ಗಳು ಪತ್ತೆಯಾಗಿವೆ. ಇವುಗಳ ಒಟ್ಟು ತೂಕ 739 ಕೆ.ಜಿ ಇತ್ತು. ಅಣ್ಯಮಯ್ಯ ಜಿಲ್ಲೆಯ ವರಪ್ರಸಾದ್ ರೆಡ್ಡಿ ಮತ್ತು ರಾಜ್‌ಶೇಖರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಿನೇ ದಿನೇ ಹೆಚ್ಚುತ್ತಿರುವ ರಕ್ತಚಂದನದ ಅಕ್ರಮ ಸಾಗಾಟವನ್ನು ತಡೆಯಲು ಬೆಂಗಳೂರು ಪೊಲೀಸರು ಈ ಪ್ರಮುಖ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಆಂಧ್ರಪ್ರದೇಶದಿಂದ ಈ ರಕ್ತಚಂದನವನ್ನು ಅಕ್ರಮವಾಗಿ ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ತಮಿಳುನಾಡು ಅಥವಾ ಇತರೆಡೆಗೆ ಸಾಗಿಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಪೊಳೀಸರು ತೀವ್ಯ ತನಿಖೆ ಕೈಗೊಂಡಿದ್ದು, ಮುಂದಿನ ಕ್ರಮ ಏನು ಎಂಬುದನ್ನ ಕಾದು ನೋಡಬೇಕಿದೆ.





