ಬೆಂಗಳೂರು: ಚೀಟಿ ವ್ಯವಹಾರ ಸಂಬಂಧಿತ ಪ್ರಕರಣವನ್ನು ನೆಪವಿಟ್ಟು ವ್ಯಕ್ತಿಯೊಬ್ಬರನ್ನು ಬೆದರಿಸಿ 4 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಬಂಧಿತ ಅಧಿಕಾರಿ.
ಮೈಸೂರು ರಸ್ತೆಯ ಸಿರಸಿ ಸರ್ಕಲ್ ಸಮೀಪದ ಸಿಎಆರ್ (CAR) ಗ್ರೌಂಡ್ ಬಳಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಪೂರ್ವನಿಯೋಜಿತ ಕಾರ್ಯಾಚರಣೆಯಂತೆ ಲೋಕಾಯುಕ್ತ ತಂಡ ಬಲೆಗೆ ಹಾಕಿ, ಇನ್ಸ್‌ಪೆಕ್ಟರ್ ಗೋವಿಂದರಾಜು ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ
ಲಂಚದ ಹಿನ್ನೆಲೆ ಏನು?
ಚೀಟಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಆರೋಪಿಯಾಗಿಸಿ ಪ್ರಕರಣ ದಾಖಲಿಸುವುದಾಗಿ ಬೆದರಿಸಿ, ಈ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು ಆ ವ್ಯಕ್ತಿಯಿಂದ 4 ಲಕ್ಷ ರೂಪಾಯಿ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು. ಈ ಬಗ್ಗೆ ಬೇಸರಗೊಂಡ ಸಂತ್ರಸ್ತರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದು, ಆಧಾರದ ಮೇಲೆ ಕಾರ್ಯಾಚರಣೆ ರೂಪಿಸಲಾಗಿತ್ತು.
ಪೂರ್ವಸಿದ್ಧತೆ ಮಾಡಿಕೊಂಡ ಲೋಕಾಯುಕ್ತ ತಂಡ
ದೂರು ಬಂದ ತಕ್ಷಣ ಲೋಕಾಯುಕ್ತ ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸಿದ್ದರು. ನಂತರ ಟ್ರ್ಯಾಪ್ ಕಾರ್ಯಾಚರಣೆಗೆ ತಯಾರಿ ಮಾಡಿಕೊಂಡು, ಸಂತ್ರಸ್ತ ವ್ಯಕ್ತಿಗೆ ಮಾರ್ಗದರ್ಶನ ನೀಡಿ ಹಣ ನೀಡುವ ಸಂದರ್ಭವನ್ನು ನಿಗದಿ ಮಾಡಲಾಯಿತು. ಅದರಂತೆ ನಿಗದಿತ ಸ್ಥಳವಾದ ಸಿರಸಿ ಸರ್ಕಲ್ ಬಳಿಯ CAR ಗ್ರೌಂಡ್ ಬಳಿ ಇನ್ಸ್‌ಪೆಕ್ಟರ್ ಗೋವಿಂದರಾಜು ಹಣ ಸ್ವೀಕರಿಸಲು ಆಗಮಿಸಿದ್ದರು.
ಹಣ ಸ್ವೀಕರಿಸಿದ ಕ್ಷಣದಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದರು. ಅವರ ಬಳಿ ಇದ್ದ 4 ಲಕ್ಷ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಈ ವೇಳೆ ಅಗತ್ಯ ದಾಖಲೆಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ಮುಂದುವರಿಕೆ
ಬಂಧಿತ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರನ್ನು ಲೋಕಾಯುಕ್ತ ಕಚೇರಿಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಲಂಚಕ್ಕೆ ತಾಳಿ ಅಡವಿಟ್ಟಿದ್ದ ಗುತ್ತಿಗೆದಾರ: ಜಿಲ್ಲಾ ಸರ್ಜನ್ ಲೋಕಾಯುಕ್ತ ಬಲೆಗೆ!
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಾನಂದ ಕುಡ್ತಲಕರ್ ಗುರುವಾರ (ಜುಲೈ 10) ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆಸ್ಪತ್ರೆಯ ರೋಗಿಗಳಿಗೆ ಬೆಡ್ ಶೀಟ್ ಮತ್ತು ಪೀಠೋಪಕರಣ ಖರೀದಿಗಾಗಿ 3.43 ಲಕ್ಷ ರೂಪಾಯಿಯ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಅಂಕೋಲಾದ ವಿಶಾಲ್ ಫರ್ನಿಚರ್ ಸಂಸ್ಥೆಯ ಮಾಲಿಕ ಮೌಸೀನ್ ಅಹಮ್ಮದ್ ಶೇಖ್‌ಗೆ ದೊರೆತಿತ್ತು. ಟೆಂಡರ್‌ನ ಹಣ ಬಿಡುಗಡೆಗೆ ಡಾ. ಕುಡ್ತಲಕರ್ 75,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುರುವಾರ 30,000 ರೂಪಾಯಿ ಸ್ವೀಕರಿಸುವಾಗ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ನೇತೃತ್ವದ ತಂಡ ದಾಳಿ ನಡೆಸಿ ಅವರನ್ನು ಬಂಧಿಸಿತು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದರಿಂದ ತುರ್ತು ಚಿಕಿತ್ಸೆಗಾಗಿ ಜನರು ಗೋವಾ ಅಥವಾ ಮಂಗಳೂರಿಗೆ ಹೋಗಬೇಕಾಗುತ್ತದೆ. ಆದ್ದರಿಂದ, ಜಿಲ್ಲಾ ಆಸ್ಪತ್ರೆಯೇ ಬಡವರಿಗೆ ಸಂಜೀವಿನಿಯಾಗಿದೆ. ಆದರೆ, ಈ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದ ಆರೋಪಗಳು ಹಿಂದಿನಿಂದಲೂ ಕೇಳಿಬಂದಿವೆ. ಡಾ. ಕುಡ್ತಲಕರ್ ಕಳೆದ 15 ವರ್ಷಗಳಿಂದ ಜಿಲ್ಲಾ ಸರ್ಜನ್ ಆಗಿದ್ದು, ಲಂಚ ಇಲ್ಲದೆ ಯಾವುದೇ ಕೆಲಸ ಮಾಡದಿರುವ ಆರೋಪಕ್ಕೆ ಒಳಗಾಗಿದ್ದರು.
ಡಾ. ಕುಡ್ತಲಕರ್ ಟೆಂಡರ್‌ನ ಹಣ ಬಿಡುಗಡೆಗೆ 75,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬುಧವಾರ ರಾತ್ರಿ ಗುತ್ತಿಗೆದಾರ ಮೌಸೀನ್ ಅಹಮ್ಮದ್ ಶೇಖ್‌ನನ್ನು ಮನೆಗೆ ಕರೆಸಿ 20,000 ರೂಪಾಯಿ ಪಡೆದಿದ್ದರು. ಆದರೆ, ಇನ್ನೂ 30,000 ರೂಪಾಯಿ ಕೊಡಲು ಒತ್ತಾಯಿಸಿದಾಗ, ಗುತ್ತಿಗೆದಾರ ಗುರುವಾರ ಕಚೇರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿತು. ಈ ಹಿಂದೆಯೂ ಕುಡ್ತಲಕರ್ ಇದೇ ಗುತ್ತಿಗೆದಾರನಿಂದ 16 ಲಕ್ಷ ರೂಪಾಯಿಯ ಟೆಂಡರ್‌ಗೆ 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕಾಟ ತಡೆಯಲಾಗದೆ, ಗುತ್ತಿಗೆದಾರನ ಪತ್ನಿ ತನ್ನ ಮಾಂಗಲ್ಯವನ್ನೇ ಅಡವಿಟ್ಟು ಹಣ ಕೊಟ್ಟಿದ್ದರು ಎನ್ನಲಾಗಿದೆ.





