ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದು, ಸಾವಿರಾರು ಮಂದಿ ಆಶ್ರಯಿಸಿರುವ ಪೇಯಿಂಗ್ ಗೆಸ್ಟ್ (PG) ನಿಲಯಗಳಲ್ಲಿ ಮಧ್ಯಾಹ್ನದ ಊಟದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತ ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟಕ್ಕೂ ಗ್ಯಾಸ್ ಅಭಾವ ಕಂಟಕವಾಗಿ ಪರಿಣಮಿಸಿದೆ.
ಪಿಜಿ ನಿವಾಸಿಗಳ ಪರದಾಟ
ಬೆಂಗಳೂರಿನಲ್ಲಿ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಸಾವಿರಾರು ಯುವಕ-ಯುವತಿಯರು ಪಿಜಿಗಳನ್ನು ಅವಲಂಬಿಸಿದ್ದಾರೆ. ಆದರೆ, ವಾಣಿಜ್ಯ ಸಿಲಿಂಡರ್‌ಗಳು ಸಿಗದ ಕಾರಣ ಪಿಜಿ ಮಾಲೀಕರು ಅಸಹಾಯಕರಾಗಿದ್ದಾರೆ. ರಾತ್ರೋರಾತ್ರಿ ಸೌದೆ ಒಲೆ ಅಥವಾ ಎಲೆಕ್ಟ್ರಿಕ್ ಸ್ಟವ್‌ಗಳಿಗೆ ಬದಲಾಗುವುದು ಅಸಾಧ್ಯ. ಹೀಗಾಗಿ ಗ್ಯಾಸ್ ಪೂರೈಕೆ ಸರಿಯಾಗುವವರೆಗೂ ಮಧ್ಯಾಹ್ನದ ಊಟ ನೀಡುವುದಿಲ್ಲ ಎಂದು ಹಲವು ಪಿಜಿ ಮಾಲೀಕರು ಘೋಷಿಸಿದ್ದಾರೆ.
ಮಾಸಿಕ ಶುಲ್ಕ ಪಾವತಿಸಿದರೂ ಊಟವಿಲ್ಲದೆ ನಿವಾಸಿಗಳು ಪರದಾಡುವಂತಾಗಿದೆ. ಇದಕ್ಕೆ ಪರ್ಯಾಯವಾಗಿ ಪಿಜಿ ಮಾಲೀಕರ ಸಂಘವು ತನ್ನ ಸದಸ್ಯರಿಗೆ ಹೊಸ ಸೂಚನೆ ನೀಡಿದೆ. ಹೆಚ್ಚು ಗ್ಯಾಸ್ ಬಳಕೆಯಾಗುವ ಚಪಾತಿ, ದೋಸೆಗಳ ಬದಲಿಗೆ ಕೇವಲ ರೈಸ್ ಐಟಂ (ಪಲಾವ್, ಅನ್ನ-ಸಾಂಬಾರ್) ತಯಾರಿಸಲು ಮತ್ತು ತರಕಾರಿ, ಕಾಳುಗಳ ವಿತರಣೆಗೆ ಒತ್ತು ನೀಡಲು ತಿಳಿಸಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟದ ಆತಂಕ
ಗ್ಯಾಸ್ ಕೊರತೆಯ ಬಿಸಿ ಕೇವಲ ವಾಣಿಜ್ಯ ಕ್ಷೇತ್ರಕ್ಕಲ್ಲದೆ, ಸರ್ಕಾರಿ ಶಾಲೆಗಳಿಗೂ ತಟ್ಟಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಮಕ್ಕಳಿಗೆ ಬಿಸಿಯೂಟ ತಯಾರಿಸಲು ತಿಂಗಳಿಗೆ ಕನಿಷ್ಠ 4-5 ಸಿಲಿಂಡರ್‌ಗಳ ಅಗತ್ಯವಿರುತ್ತದೆ. ಆದರೆ, ಏಜೆನ್ಸಿಗಳು ಈಗ ಕೇವಲ ಒಂದು ಸಿಲಿಂಡರ್ ನೀಡುತ್ತಿರುವುದರಿಂದ, ಹಳೇ ಬಾಗಲಕೋಟೆಯ ಸರ್ಕಾರಿ ಶಾಲೆಗಳಲ್ಲಿ ಸಿಬ್ಬಂದಿಗಳು ಒಂದೇ ಸಿಲಿಂಡರ್‌ನಲ್ಲಿ ನೂರಾರು ಮಕ್ಕಳಿಗೆ ಅಡುಗೆ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ.
ಗೃಹಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ತುಸು ಸಡಿಲಿಕೆ ತೋರಿವೆ. ತಿಂಗಳಿಗೆ ಒಂದು ಸಿಲಿಂಡರ್ ಮನೆಗಳಿಗೆ ತಲುಪುತ್ತಿದೆ. ಆದರೆ, ಹೋಟೆಲ್, ಪಿಜಿ ಮತ್ತು ಶಾಲೆಗಳಿಗೆ ಬೇಕಾದ ವಾಣಿಜ್ಯ ಸಿಲಿಂಡರ್‌ಗಳ ಮಾರುಕಟ್ಟೆ ಮಾತ್ರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹೊರಗಡೆ ಹೋಟೆಲ್‌ಗಳಲ್ಲೂ ಊಟ ಸಿಗದೆ ಜನ ಸಾಮಾನ್ಯರು ಪರದಾಡುವ ಸ್ಥಿತಿ ಉಂಟಾಗಿದೆ.





