ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟಿಗಟ್ಟಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ನಿಗಮದ ಅಧ್ಯಕ್ಷರಾಗಿದ್ದ ರವಿಕುಮಾರ್ ಅವರು ಭೂಹಂಚಿಕೆ ಮತ್ತು ನಿವೇಶನಗಳ ಉಪನಿರ್ಮಾಣ ಯೋಜನೆಗಳಲ್ಲಿ ಕೋಟಿಗಟ್ಟಲೆ ರೂಪಾಯಿಗಳ ಲಂಚ ವ್ಯವಹಾರ ನಡೆಸಿದ್ದಾರೆಂದು ಆರೋಪಗಳಿವೆ. ಈ ಹಿನ್ನೆಲೆ ನಿಗಮದ ಅಧ್ಯಕ್ಷ ರವಿಕುಮಾರ್ ವಿರುದ್ಧ ಕೊನೆಗೂ ಕ್ರಮ ಕೈಗೊಳ್ಳಲಾಗಿದ್ದು, ಗ್ಯಾರಂಟಿ ನ್ಯೂಸ್‌ನ ವರದಿಯ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿಕುಮಾರ್‌ಗೆ ತಕ್ಷಣವೇ ರಾಜೀನಾಮೆ ನೀಡುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಭ್ರಷ್ಟಾಚಾರದ ಆರೋಪಗಳು
ಈ ಬಗ್ಗೆ ಗ್ಯಾರಂಟಿ ನ್ಯೂಸ್ ವರದಿ ಮಾಡಿದ್ದು, ರವಿಕುಮಾರ್ ಭೋವಿ ನಿಗಮದ ಕಚೇರಿಯ ಚೇಂಬರ್‌ನಲ್ಲಿಯೇ ಕೋಟಿ ಕೋಟಿ ರೂಪಾಯಿಗಳ ಲಂಚದ ಡೀಲ್ ನಡೆಸಿದ್ದರು. ಭೂಮಿ ಕೊಡುಗೆ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ನೀಡಲು 60% ಕಮಿಷನ್ ಬೇಡಿಕೆ ಇಟ್ಟಿದ್ದ ಆರೋಪವಿದೆ. ಈ ಬಗ್ಗೆ ವಿಡಿಯೋ ಸಾಕ್ಷಿಯೊಂದಿಗೆ ಗ್ಯಾರಂಟಿ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು. ವಿಡಿಯೋದಲ್ಲಿ ರವಿಕುಮಾರ್ ಲಂಚದ ಬೇಡಿಕೆಯನ್ನು ಖುದ್ದಾಗಿ ಮಾತನಾಡುತ್ತಿರುವುದು ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ಬಂದಿತ್ತು.
ನಿನ್ನೆ ಮೈಸೂರಿನಲ್ಲಿದ್ದಾಗಲೇ ಈ ಆರೋಪಗಳ ಬಗ್ಗೆ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ, ತಕ್ಷಣವೇ ಕ್ರಮಕ್ಕೆ ನಿರ್ಧರಿಸಿದರು. ರವಿಕುಮಾರ್‌ಗೆ ತಕ್ಷಣ ಬೆಂಗಳೂರಿಗೆ ಬಂದು ರಾಜೀನಾಮೆ ಸಲ್ಲಿಸುವಂತೆ ಸೂಚಿಸಲಾಗಿದೆ. ಸಾಕ್ಷಿಗಳೊಂದಿಗೆ ಈ ಆರೋಪ ಸಾಬೀತಾಗಿತ್ತು.
ಭೋವಿ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿಯ ಭೋವಿ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಉನ್ನತಿಗಾಗಿ ಸ್ಥಾಪಿತವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಿಗಮದಲ್ಲಿ ಕೋಟಿಗಟ್ಟಲೆ ರೂಪಾಯಿಗಳ ಅವ್ಯವಹಾರದ ಆರೋಪಗಳು ಕೇಳಿಬಂದಿವೆ.