ಬೆಂಗಳೂರು: ಮಗುವಿಗೆ ಜ್ವರ ಬಂದಾಗ ಮಗುವನ್ನು ಗುಣಪಡಿಸಲು ಪೋಷಕರು ಆಸ್ಪತ್ರೆಗೆ ಕರೆತರುತ್ತಾರೆ. ಆದರೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರ ನರ್ಸ್ ಮಾಡಿದ ಎಡವಟ್ಟು, ಪುಟ್ಟ ಕಂದಮ್ಮನ ಒಂದು ಬೆರಳನ್ನೇ ಬಲಿಪಡೆದಿರುವ ಘಟನೆ ಇಂದಿರಾನಗರದ ಚಿನ್ಮಯ್ ಮಿಷನ್ ಆಸ್ಪತ್ರೆಯಲ್ಲಿ ನಡೆದಿದೆ.
ಘಟನೆಯ ವಿವರ
ಬೆಂಗಳೂರಿನ ವಿಜಯ್ ಎಂಬುವವರ ಆರು ತಿಂಗಳ ಮಗುವಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಫೆಬ್ರವರಿ 19 ರಂದು ಇಂದಿರಾನಗರದ ಚಿನ್ಮಯ್ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐದು ದಿನಗಳ ಕಾಲ ಮಗುವಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು. ಫೆಬ್ರವರಿ 24ರ ಮಂಗಳವಾರದಂದು ಮಗು ಚೇತರಿಸಿಕೊಂಡಿದ್ದರಿಂದ ಡಿಸ್ಚಾರ್ಜ್ ಮಾಡಲು ಆಸ್ಪತ್ರೆ ಸೂಚಿಸಿತ್ತು. ಪೋಷಕರು ಚಿಕಿತ್ಸಾ ವೆಚ್ಚವನ್ನೆಲ್ಲ ಪಾವತಿಸಿ ಮಗುವನ್ನು ಮನೆಗೆ ಕರೆದೊಯ್ಯಲು ಸಿದ್ಧರಾಗಿದ್ದರು.
ಮಗುವಿನ ಕೈಗೆ ಹಾಕಲಾಗಿದ್ದ ಡ್ರಿಪ್ಸ್ (IV Drip) ತೆಗೆಯುವ ಸಂದರ್ಭದಲ್ಲಿ ಈ ಘೋರ ದುರಂತ ಸಂಭವಿಸಿದೆ. ಪ್ಲಾಸ್ಟರ್ ಅಥವಾ ಡ್ರೆಸ್ಸಿಂಗ್ ಪಟ್ಟಿಯನ್ನು ತೆಗೆಯಲು ಬಂದ ನರ್ಸ್, ಕತ್ತರಿ ಬಳಸುವಾಗ ತೀವ್ರ ಅಜಾಗರೂಕತೆ ತೋರಿದ್ದಾರೆ. ಪ್ಲಾಸ್ಟರ್ ಕಟ್ ಮಾಡುವ ಬದಲು ಮಗುವಿನ ಎಡಗೈ ಕಿರುಬೆರಳಿನ ಅರ್ಧ ಭಾಗವನ್ನೇ ಕತ್ತರಿಸಿದ್ದಾರೆ.
ನನ್ನ ಕಣ್ಣೆದುರೇ ಈ ಘಟನೆ ನಡೆಯಿತು. ಪ್ಲಾಸ್ಟರ್ ಓಪನ್ ಮಾಡುವಾಗ ರಾಂಗ್ ಸೈಡ್‌ನಲ್ಲಿ ಕತ್ತರಿ ಹಾಕಿದರು. ಕೇವಲ ಕೆಲವೇ ಸೆಕೆಂಡ್‌ಗಳಲ್ಲಿ ಮಗುವಿನ ಬೆರಳು ಕಟ್ ಆಯಿತು. ಮಗುವಿನ ಚೀರಾಟ ಮತ್ತು ನೋವಿನ ಒದ್ದಾಟವನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ತಂದೆ ವಿಜಯ್ ಕಣ್ಣೀರು ಹಾಕುತ್ತಾ ನೋವು ತೋಡಿಕೊಂಡಿದ್ದಾರೆ.
ಬೆರಳು ಕಟ್ ಆದ ತಕ್ಷಣ ಮಗುವನ್ನು ತುರ್ತು ಚಿಕಿತ್ಸಾ ಘಟಕಕ್ಕೆ (ICU) ರವಾನಿಸಲಾಯಿತು. ಆದರೆ ನಂತರ ವೈದ್ಯರು ಬಂದು ಬೆರಳಿಗೆ ಗಂಭೀರ ಗಾಯವಾಗಿದ್ದರಿಂದ ಅದನ್ನು ಸಂಪೂರ್ಣವಾಗಿ ಕಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಆಸ್ಪತ್ರೆಯ ವೈದ್ಯೆ ಅನಿತಾ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಘಟನೆಗೆ ನೇರ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಗುವಿನ ಪೋಷಕರು ಮತ್ತು ಸಾರ್ವಜನಿಕರು ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಒಂದು ಸಣ್ಣ ಜ್ವರಕ್ಕೆ ಬಂದ ಮಗು ಜೀವನಪರ್ಯಂತ ಅಂಗವೈಕಲ್ಯ ಅನುಭವಿಸುವಂತಾಗಿದೆ.





