ಬೆಂಗಳೂರು: ಪೂಜೆ ಹೆಸರಿನಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ನಗದು ಹಾಗೂ 100 ಗ್ರಾಂ ಚಿನ್ನ ಪಡೆದು ವಂಚಿಸಿದ ಆರೋಪದ ಮೇಲೆ ಗುರೂಜಿ ಸೇರಿದಂತೆ ಇಬ್ಬರ ವಿರುದ್ಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗಾಯತ್ರಿನಗರದ ರೂಪಶ್ರೀ ಎಂಬ ಮಹಿಳೆಯು ನೀಡಿದ ದೂರಿನ ಮೇರೆಗೆ ಡಾ. ಕಿರಣ್ ಕುಮಾರ್ ಗುರೂಜಿ ಮತ್ತು ಅವರ ಸಹಚರ ಲೋಹಿತ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ರೂಪಶ್ರೀ ಅವರ ಪತಿ ಮತ್ತು ಇಬ್ಬರು ಮಕ್ಕಳು ವಿದೇಶದಲ್ಲಿ ವಾಸವಾಗಿದ್ದಾರೆ. ಗಾಯತ್ರಿನಗರದಲ್ಲಿ ತಂದೆಯೊಂದಿಗೆ ವಾಸಿಸುತ್ತಿರುವ ಈ ಮಹಿಳೆ, ಮೂರು ನಾಲ್ಕು ವರ್ಷಗಳ ಹಿಂದೆ ಕಿರಣ್ ಕುಮಾರ್ ಗುರೂಜಿಯ ಪರಿಚಯವಾಗಿತ್ತು. ಕುಟುಂಬದ ಮೇಲೆ ವಾಮಾಚಾರ ಪ್ರಭಾವವಿದೆ ಹಾಗೂ ಪತಿಯ ಜೀವಕ್ಕೆ ಅಪಾಯವಿದೆ ಎಂದು ಗುರೂಜಿ ಹೆದರಿಸಿದ್ದಾನೆ. ಇದಕ್ಕೆ ಹೆದರಿದ ಮಹಿಳೆ ಪೂಜೆ ಮಾಡಿಸಿಕೊಡುವಂತೆ ಕೋರಿದ್ದಾಳೆ.
ಗುರೂಜಿ, ಪೂಜೆಗೆ ಹೆಚ್ಚಿನ ವೆಚ್ಚ ಬರುತ್ತದೆ ಎಂದು ನಂಬಿಸಿ ಹಂತಹಂತವಾಗಿ 1 ಕೋಟಿ ರೂಪಾಯಿಗೂ ಹೆಚ್ಚು ಹಣ ಹಾಗೂ 100 ಗ್ರಾಂ ಚಿನ್ನವನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೂಜೆಯ ನಂತರವೂ ಕುಟುಂಬದ ಸಮಸ್ಯೆಗಳು ಪರಿಹಾರವಾಗದೆ, ಮಹಿಳೆಯು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. ನಂತರ ಹಣವನ್ನು ಹಿಂದಿರುಗಿಸುವಂತೆ ಗುರೂಜಿಯನ್ನು ಕೇಳಿದ್ದಾರೆ. ಆ ವೇಳೆ ಗುರೂಜಿ ಮತ್ತು ಲೋಹಿತ್ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದು, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಮಹಿಳೆಯ ದೂರಿನ ಆಧಾರದಲ್ಲಿ ಸುಬ್ರಹ್ಮಣ್ಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರೆಯುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
