ಸಿದ್ದರಾಮಯ್ಯ ಬಜೆಟ್ ಡೇಟ್ ಫಿಕ್ಸ್: ಮಾರ್ಚ್ 6ರಂದು ದಾಖಲೆಯ ಆಯವ್ಯಯ ಮಂಡನೆ

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ರಾಜ್ಯದ 2026-27ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಬಜೆಟ್ ಅಧಿವೇಶನವು ಮಾರ್ಚ್ 6ರಿಂದ ಮಾರ್ಚ್ 27ರವರೆಗೆ ನಡೆಯಲಿದೆ. ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ ಆಗಿರುವುದು ವಿಶೇಷ.

ಈ ಬಾರಿಯ ಬಜೆಟ್ ಸಿದ್ದರಾಮಯ್ಯ ಅವರಿಗೆ ದೊಡ್ಡ ಸವಾಲಾಗಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಪ್ರತಿವರ್ಷ ಸುಮಾರು 50,000 ರಿಂದ 60,000 ಕೋಟಿ ರೂಪಾಯಿಗಳ ಬೃಹತ್ ಅನುದಾನದ ಅಗತ್ಯವಿದೆ. ಈ ಆರ್ಥಿಕ ಹೊರೆಯ ನಡುವೆಯೂ ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆಯಾಗದಂತೆ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವುದು ಮುಖ್ಯಮಂತ್ರಿಯವರ ಮುಂದಿರುವ ಗುರಿ. ಈಗಾಗಲೇ ಅವರು ವಿವಿಧ ಇಲಾಖೆಗಳಿಂದ ಹೊಸ ಯೋಜನೆಗಳ ಪ್ರಸ್ತಾವನೆಗಳನ್ನು ಸ್ವೀಕರಿಸಿದ್ದು, ಅನುದಾನ ಬಳಕೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಬಜೆಟ್‌ನ ಪ್ರಮುಖ ನಿರೀಕ್ಷೆಗಳು:
ವಿಶೇಷ ವಲಯಗಳಿಗೆ ಆದ್ಯತೆ

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ, ಸ್ತ್ರೀ ಶಕ್ತಿ ಸಂಘಗಳ ಸಾಲದ ಬಡ್ಡಿ ಮನ್ನಾ ಮತ್ತು ವಸತಿ ರಹಿತ ಕುಟುಂಬಗಳಿಗೆ ಮನೆ ನಿರ್ಮಿಸಲು ನೀಡುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸುವ ಬೇಡಿಕೆ ಜನಸಾಮಾನ್ಯರಿಂದ ಕೇಳಿಬರುತ್ತಿದೆ. ಅಲ್ಲದೆ, ಶಕ್ತಿ ಯೋಜನೆಯಿಂದ ಬಾಧಿತವಾಗಿರುವ ಖಾಸಗಿ ಬಸ್ ಮತ್ತು ಆಟೋ ಚಾಲಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವ ಸಾಧ್ಯತೆಯೂ ಇದೆ.

ಒಟ್ಟಾರೆಯಾಗಿ, ತೆರಿಗೆ ಹೆಚ್ಚಳ ಮಾಡದೆ ಜನಪ್ರಿಯ ಯೋಜನೆಗಳನ್ನು ಮುಂದುವರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆ ಗಳಿಸುವುದು ಸರ್ಕಾರದ ಉದ್ದೇಶವಾಗಿದೆ.

Exit mobile version