ಬೆಂಗಳೂರು: ಇಂದು ನಮಗೆಲ್ಲರಿಗೂ ಸೋಶಿಯಲ್ ಮೀಡಿಯಾ ಎನ್ನುವುದು ಬದುಕಿನ ಅವಿಭಾಜ್ಯ ಅಂಗ. ಕೇವಲ ಹತ್ತು ವರ್ಷಗಳ ಹಿಂದೆ “ಇನ್‌ಫ್ಲುಯೆನ್ಸರ್” ಎನ್ನುವ ಪದವೇ ಅಸ್ತಿತ್ವದಲ್ಲಿ ಇರಲಿಲ್ಲ. ಆದರೆ ಇಂದು, ಒಂದು ಫೋಟೋ ಅಥವಾ ವೀಡಿಯೊ ಮೂಲಕ ಲಕ್ಷಾಂತರ ರೂಪಾಯಿ ಗಳಿಸುವ ಡಿಜಿಟಲ್ ಸ್ಟಾರ್‌ಗಳು ಸಮಾಜದ ಹೊಸ ಐಕಾನ್‌ಗಳಾಗಿದ್ದಾರೆ. ಆದರೆ, ಇದೇ ಗ್ಲಾಮರ್ ಬದುಕನ್ನು ಬೆನ್ನತ್ತಿರುವ ಇನ್‌ಫ್ಲುಯೆನ್ಸರ್‌ಗಳ ಸ್ಥಿತಿ 2050ರ ಹೊತ್ತಿಗೆ ಹೇಗಿರಬಹುದು ? ವಿಜ್ಞಾನಿಗಳ ಹೊಸ ಅಧ್ಯಯನವೊಂದು ನಡುಕ ಹುಟ್ಟಿಸುವ ಭವಿಷ್ಯ ನುಡಿದಿದೆ.
ಯಾರು ಈ ‘ಆವಾ’ (Ava)?
ವಿಜ್ಞಾನಿಗಳು ಭವಿಷ್ಯದ ಇನ್‌ಫ್ಲುಯೆನ್ಸರ್ ದೈಹಿಕವಾಗಿ ಹೇಗೆ ಕಾಣಿಸಬಹುದು ಎಂದು ಚಿತ್ರಿಸಲು “ಆವಾ” ಎಂಬ ಕೃತಕ ಮಾದರಿ ವ್ಯಕ್ತಿಯನ್ನು ಸೃಷ್ಟಿಸಿದ್ದಾರೆ. ನಿರಂತರವಾಗಿ ಸ್ಕ್ರೀನ್ ಮುಂದೆ ಕುಳಿತು, ಅಲ್ಗೋರಿದಮ್‌ಗಳ ಗುಲಾಮರಾಗಿ ಕೆಲಸ ಮಾಡುವ ವ್ಯಕ್ತಿಯ ದೇಹದಲ್ಲಿ ಯಾವೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ಈ ಮಾದರಿ ತೋರಿಸುತ್ತದೆ.
ಆವಾಳ ವಿಲಕ್ಷಣ ರೂಪದ ಲಕ್ಷಣಗಳು:
-
ಕುಗ್ಗಿದ ಬೆನ್ನು (Hunched Back): ಮೊಬೈಲ್ ಮತ್ತು ಲ್ಯಾಪ್ಟಾಪ್ ಕಡೆಗೆ ತಲೆ ಬಗ್ಗಿಸಿ ಗಂಟೆಗಟ್ಟಲೆ ಕುಳಿತುಕೊಳ್ಳುವುದರಿಂದ ಬೆನ್ನುಮೂಳೆಯ ಆಕಾರವೇ ಬದಲಾಗಿ, ಗೂನು ಬೆನ್ನು ಉಂಟಾಗುತ್ತದೆ.
-
ಚರ್ಮದ ಸಮಸ್ಯೆಗಳು: ಎಲ್ಇಡಿ (LED) ಬೆಳಕು ಮತ್ತು ನೀಲಿ ಕಿರಣಗಳಿಗೆ (Blue Light) ಅತಿಯಾಗಿ ಒಡ್ಡಿಕೊಳ್ಳುವುದರಿಂದ ಚರ್ಮದ ಕಾಂತಿ ಕಳೆದುಹೋಗಿ, ಕಣ್ಣಿನ ಸುತ್ತ ಕಪ್ಪು ವಲಯಗಳು ಮತ್ತು ಅಕಾಲಿಕ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ.
-
ಬೋಳುತನ: ಸದಾ ಆಕರ್ಷಕವಾಗಿ ಕಾಣಲು ವರ್ಷಗಳ ಕಾಲ ಹೇರ್ ಎಕ್ಸ್ಟೆನ್ಷನ್ ಮತ್ತು ರಾಸಾಯನಿಕಗಳ ಬಳಕೆ ಮಾಡಿದ್ದರಿಂದ ಕೂದಲು ಉದುರಿ ತಲೆ ಬೋಳಾಗುತ್ತದೆ.
-
ಮುಖದ ವಿಕಾರ: ನಿರಂತರವಾಗಿ ಫೇಸ್ ಫಿಲ್ಲರ್ಗಳು ಮತ್ತು ಪ್ಲಾಸ್ಟಿಕ್ ಸರ್ಜರಿಗಳಿಗೆ ಒಳಗಾಗುವುದರಿಂದ ಗಲ್ಲ ಮುಳ್ಳಿನಂತೆ ಚೂಪಾಗಿ, ನೈಸರ್ಗಿಕ ಸೌಂದರ್ಯ ಮಾಯವಾಗಿ ಮುಖ ಕುರೂಪಗೊಳ್ಳುತ್ತದೆ.
90 ಗಂಟೆಗಳ ಕೆಲಸದ ಅಡ್ಡಪರಿಣಾಮ
ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (BBC) ವರದಿಯ ಪ್ರಕಾರ, ಇಂದಿನ ಅನೇಕ ಇನ್‌ಫ್ಲುಯೆನ್ಸರ್‌ಗಳು ವಾರಕ್ಕೆ ಸುಮಾರು 90 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ತಡರಾತ್ರಿ ವರೆಗೂ ಎಡಿಟಿಂಗ್, ಬ್ರ್ಯಾಂಡ್ ಶೂಟ್‌ಗಳು ಮತ್ತು ನಿರಂತರ ಪ್ರಯಾಣಗಳಿಂದಾಗಿ ಇವರ ದೇಹದಲ್ಲಿ ಮೆಲಟೊನಿನ್ (ನಿದ್ರೆಯ ಹಾರ್ಮೋನ್) ಉತ್ಪಾದನೆ ಕುಂಠಿತಗೊಳ್ಳುತ್ತದೆ. ಇದು ದೀರ್ಘಕಾಲದ ದೌರ್ಬಲ್ಯ (Chronic Fatigue) ಮತ್ತು ತೀವ್ರ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.
ಇಂದಿನ ದಿನಗಳಲ್ಲಿ ಸಣ್ಣ ಮಕ್ಕಳೂ ಕೂಡ ಇನ್‌ಫ್ಲುಯೆನ್ಸರ್‌ಗಳಾಗುತ್ತಿದ್ದಾರೆ. ಪೋಷಕರು ಲಾಭದ ಉದ್ದೇಶದಿಂದ ಮಕ್ಕಳನ್ನು ಕ್ಯಾಮೆರಾ ಮುಂದೆ ನಿಲ್ಲಿಸುತ್ತಿದ್ದಾರೆ. ಹುಟ್ಟಿನಿಂದಲೇ ಲೈಕು, ಶೇರ್‌ಗಳಿಗಾಗಿ ಹಾತೊರೆಯುವ ಈ ಮಕ್ಕಳು ತಮ್ಮ ಮುಗ್ಧ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಮುಂದಿನ ಪೀಳಿಗೆಯ ಮಾನಸಿಕ ಆರೋಗ್ಯವು ಸದಾ ಜನಪ್ರಿಯತೆಗಾಗಿ ಹೋರಾಡುವ ಹತಾಶ ಸ್ಥಿತಿಗೆ ತಲುಪಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ಲಾಮರ್ ಹಿಂದಿನ ಕರಾಳ ಸತ್ಯ
ಫಿಲ್ಟರ್‌ಗಳ ಹಿಂದೆ ಅಡಗಿರುವ “ಪರ್ಫೆಕ್ಟ್” ಜೀವನವು ಹೊರಗಿನವರಿಗೆ ಲಕಲಕ ಎನ್ನುವಂತೆ ಕಂಡರೂ, ಒಳಗಿನ ಕಥೆಯೇ ಬೇರೆ. ಸೌಂದರ್ಯದ ಕೃತಕ ಮಾನದಂಡಗಳನ್ನು ಬೆನ್ನಟ್ಟುತ್ತಾ ಹೋದರೆ 2050ರ ಹೊತ್ತಿಗೆ ಮನುಷ್ಯ ತನ್ನ ನೈಸರ್ಗಿಕ ರೂಪವನ್ನೇ ಕಳೆದುಕೊಳ್ಳಬಹುದು. ಸೋಶಿಯಲ್ ಮೀಡಿಯಾ ಯಶಸ್ಸು ಮುಖ್ಯವೇ ಇರಬಹುದು, ಆದರೆ ಆರೋಗ್ಯವೇ ಅತಿ ದೊಡ್ಡ ಸಂಪತ್ತು ಎನ್ನುವುದನ್ನು ಮರೆಯಬಾರದು.
