ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಎಲ್ಲೆಡೆ ಸಂಭ್ರಮ ಮತ್ತು ಸಡಗರವನ್ನು ತಂದಿದೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಸಿಡಿತದ ಶಬ್ದಗಳ ಜೊತೆಗೆ ಅವಘಡಗಳ ಸರಣಿಯೂ ಹೆಚ್ಚಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಅಪಘಾತಗಳಿಂದಾಗಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇದರಲ್ಲಿ ಮಕ್ಕಳು ಮತ್ತು ಯುವಕರ ಸಂಖ್ಯೆಯೇ ಹೆಚ್ಚು. ಪಟಾಕಿ ಸಿಡಿಸುವವರು ಮಾತ್ರವಲ್ಲದೆ, ಅದನ್ನು ನೋಡಲು ಹೋದವರೂ ಗಾಯಕ್ಕೀಡಾಗಿದ್ದಾರೆ. ನಿನ್ನೆಯಷ್ಟೇ 13 ಜನರು ಆಸ್ಪತ್ರೆಗೆ ದಾಖಲಾಗಿದ್ದರು, ಮತ್ತು ಈಗಾಗಲೇ ಒಟ್ಟು ಸಂಖ್ಯೆ 100 ದಾಟಿದೆ.
ನಾರಾಯಣ ನೇತ್ರಾಲಯದಲ್ಲಿ ಮಾತ್ರ 51 ಮಂದಿ ಕಣ್ಣಿನ ಗಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 13 ಮಂದಿ ದಾಖಲಾಗಿದ್ದಾರೆ. ಈ ಪೈಕಿ ಅಕ್ಕಿಪೇಟೆಯ 20 ವರ್ಷದ ಯುವಕನೊಬ್ಬ ಪಟಾಕಿ ಸಿಡಿತದಿಂದ ಕಣ್ಣಿನ ದೃಷ್ಟಿ ಸಂಪೂರ್ಣ ಕಳೆದುಕೊಂಡಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ವೈದ್ಯಕೀಯ ಸಂಸ್ಥೆಗಳು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿವೆ. ವಿಕ್ಟೋರಿಯಾ ಆಸ್ಪತ್ರೆಯ ಮಹಾಬೋಧಿ ಬರ್ನ್ಸ್ ಸೆಂಟರ್ ಹಾಗೂ ಮಿಂಟೋ ಕಣ್ಣಿನ ಆಸ್ಪತ್ರೆಗಳು 24 ಗಂಟೆಗಳ ತುರ್ತು ಸೇವೆ ನೀಡಲು ಸಜ್ಜಾಗಿವೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಔಷಧಿಗಳು, ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿ ನಿತ್ಯ ಕರ್ತವ್ಯದಲ್ಲಿದ್ದಾರೆ. ತೀವ್ರ ಗಾಯಗಳಿಗಾಗಿ ವೆಂಟಿಲೇಟರ್‌ಗಳೊಂದಿಗೆ ತೀವ್ರ ನಿಗಾ ಘಟಕಗಳನ್ನು ಸಜ್ಜುಗೊಳಿಸಲಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯು ವಿಶೇಷ ಸಿದ್ಧತೆ ಮಾಡಿಕೊಂಡಿದ್ದು, 25 ಹಾಸಿಗೆಗಳನ್ನು ಪಟಾಕಿ ಗಾಯಗೊಂಡವರಿಗಾಗಿ ಮೀಸಲಿಟ್ಟಿದೆ. ಪುರುಷರಿಗೆ 10, ಮಹಿಳೆಯರಿಗೆ 10 ಮತ್ತು ಮಕ್ಕಳಿಗೆ 5 ಹಾಸಿಗೆಗಳನ್ನು ವಿಶೇಷವಾಗಿ ಕಾಯ್ದಿರಿಸಲಾಗಿದೆ.
ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಈ ಕೆಳಗಿನ ಆಸ್ಪತ್ರೆಗಳನ್ನು ಸಂಪರ್ಕಿಸಬಹುದು.
-
ಮಿಂಟೋ ಕಣ್ಣಿನ ಆಸ್ಪತ್ರೆ: 080-26707176 / 26706221
-
ವಿಕ್ಟೋರಿಯಾ ಆಸ್ಪತ್ರೆ: 080-26701150 (Ext: 201–202)