ಬೆಂಗಳೂರು: ಡಾಕ್ಟರ್ ಕೃತಿಕಾ ಕೊಲೆ ಪ್ರಕರಣದಲ್ಲಿ ಆರೋಪಿ ಮಹೇಂದ್ರ ರೆಡ್ಡಿ ತನ್ನ ಪತ್ನಿಗೆ ಅನಸ್ತೇಷಿಯಾ ಕೊಟ್ಟಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿರುವ ಅವನು, ಕೃತಿಕಾ ಪೋಷಕರು ತನಗೆ ಮೋಸ ಮಾಡಿ ಮದುವೆ ಮಾಡಿಸಿದರು ಎಂದು ಆರೋಪಿಸಿದ್ದಾನೆ. ಇದರಿಂದ ರಿವೆಂಜ್ ತೀರಿಸಿಕೊಳ್ಳಲು ಹತ್ಯೆಗೆ ಪ್ಲಾನ್ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾನೆ.
ಪ್ರಕರಣದ ಹಿನ್ನೆಲೆ
ಕೃತಿಕಾ ಮತ್ತು ಮಹೇಂದ್ರ ರೆಡ್ಡಿ ದಂಪತಿಗಳು ಅದ್ಧೂರಿ ಮದುವೆಯೊಂದಿಗೆ ಜೀವನ ಆರಂಭಿಸಿದ್ದರು. ಆದರೆ ಮದುವೆಯ ನಂತರ ಮಹೇಂದ್ರಗೆ ಕೃತಿಕಾ ಆರೋಗ್ಯ ಸಮಸ್ಯೆಯ ಬಗ್ಗೆ ಗೊತ್ತಾಯಿತು. ಅವಳು ಏನೇ ತಿಂದರೂ ಅಥವಾ ಕುಡಿದರೂ ವಾಂತಿ ಮಾಡುತ್ತಿದ್ದಳು ಎಂದು ಅವನು ಹೇಳಿಕೊಂಡಿದ್ದಾನೆ. ಪಾರ್ಟಿಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಇದು ಮುಜುಗರಕ್ಕೆ ಕಾರಣವಾಗುತ್ತಿತ್ತು. ಸ್ನೇಹಿತರು ತಮಾಷೆಯಾಗಿ ‘ನಿನಗೆ ರೋಗದ ಹೆಂಡತಿ ಸಿಕ್ಕಿದ್ದಾಳೆ’ ಎಂದು ಹಿಯಾಳಿಸುತ್ತಿದ್ದರಂತೆ. ಇದರಿಂದ ಮಹೇಂದ್ರನಲ್ಲಿ ಪತ್ನಿಯ ಬಗ್ಗೆ ಬೇಸರ ಮತ್ತು ಕೋಪ ಉಂಟಾಯಿತು. ಅವನು ತನ್ನ ಹೇಳಿಕೆಯಲ್ಲಿ, “ತಾನು ಒಂದೊಳ್ಳೆ ಜೀವನದ ಕನಸು ಕಂಡಿದ್ದೆ. ಆದರೆ ರೋಗಿಷ್ಟೆಯೊಬ್ಬಳನ್ನು ಮದುವೆ ಮಾಡಿಸಿದರು” ಎಂದು ಆರೋಪಿಸಿದ್ದಾನೆ.
ಪೋಷಕರ ಮೇಲೆ ಆರೋಪ
ಮಹೇಂದ್ರ ರೆಡ್ಡಿ, ಕೃತಿಕಾ ಪೋಷಕರ ಮೇಲೆ ತೀವ್ರ ಆರೋಪ ಮಾಡಿದ್ದಾನೆ. ಅವರು ಅವಳ ಆರೋಗ್ಯ ಸಮಸ್ಯೆಯನ್ನು ಮುಚ್ಚಿಟ್ಟು ಮದುವೆ ಮಾಡಿಸಿದರು ಎಂದು ಹೇಳಿದ್ದಾನೆ. “ಅದ್ಧೂರಿ ಖರ್ಚು ಮಾಡಿ ಮದುವೆ ಮಾಡಿಸಿದ್ದರೂ, ಸತ್ಯ ಗೊತ್ತಾಗಬೇಕಿತ್ತು. ಇದು ಸಂಪೂರ್ಣ ವಂಚನೆ” ಎಂದು ಅವನು ಹೇಳಿಕೊಂಡಿದ್ದಾನೆ. ಇದರಿಂದಾಗಿ ಅವನು ಪತ್ನಿಯಿಂದ ದೂರವಾಗಲು ನಿರ್ಧರಿಸಿದ್ದನಂತೆ. ಮತ್ತೊಬ್ಬ ಯುವತಿಯನ್ನು ಪ್ರೀತಿಸಿ, ಕೃತಿಕಾ ಸಾವನ್ನಪ್ಪಿದರೆ ಆಕೆಯ ಜೊತೆ ಜೀವನ ನಡೆಸಬಹುದು ಎಂಬ ಉದ್ದೇಶದಿಂದ ಹತ್ಯೆಗೆ ಪ್ಲಾನ್ ರೂಪಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ.
ಈ ಪ್ರಕರಣದ ಆರಂಭದಲ್ಲಿ ಮಹೇಂದ್ರ ಅನಸ್ತೇಷಿಯಾ ಕೊಟ್ಟಿದ್ದು ತಾನಲ್ಲ ಎಂದು ಹೇಳಿಕೆಗೆ ಅಂಟಿಕೊಂಡಿದ್ದ. ಆದರೆ ಪೊಲೀಸರ ವಿಭಿನ್ನ ವಿಚಾರಣಾ ತಂತ್ರಗಳಿಂದ ಅವನು ನಿಜವನ್ನು ಬಾಯ್ಬಿಟ್ಟಿದ್ದಾನೆ. “ತನ್ನದೇನೂ ತಪ್ಪಿಲ್ಲ” ಎಂದಿದ್ದವನು ಈಗ “ಅನಸ್ತೇಷಿಯಾ ಕೊಟ್ಟಿದ್ದು ನಾನೇ” ಎಂದು ವಿಡಿಯೋ ಮತ್ತು ಲಿಖಿತ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಇದನ್ನು ಅಧಿಕೃತವಾಗಿ ದಾಖಲಿಸಿದ್ದಾರೆ. ಸದ್ಯ ಅವನು ಕಸ್ಟಡಿಯಲ್ಲಿದ್ದು, ಮತ್ತಷ್ಟು ವಿವರಗಳನ್ನು ಬಹಿರಂಗಪಡಿಸಿದ್ದಾನೆ.