ಬೆಂಗಳೂರು: ಹೊಸ ವರ್ಷದ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಮತ್ತು ಸಂಚಾರದಟ್ಟಣೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಇಂದು(ಡಿ.31)ರ ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಫ್ಲೈಓವರ್‌ಗಳ ಬಳಕೆಯ ಮೇಲೆ ನಿರ್ಬಂಧ ಹೇರಲಾಗಿದೆ.
ಫ್ಲೈಓವರ್‌ಗಳ ಮೇಲೆ ಸಂಚಾರ ನಿಷೇಧ
ಡಿ.31ರ ರಾತ್ರಿ 11 ಗಂಟೆಯಿಂದ ಜ.1ರ ಬೆಳಿಗ್ಗೆ 6 ಗಂಟೆಯವರೆಗೆ ನಗರದ ಬಹುತೇಕ ಎಲ್ಲಾ ಫ್ಲೈಓವರ್‌ಗಳನ್ನು ಮುಚ್ಚಲಾಗುತ್ತದೆ.
-
ವಿಮಾನ ನಿಲ್ದಾಣ ರಸ್ತೆ: ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಹೆಬ್ಬಾಳ ಫ್ಲೈಓವರ್ ಮೇಲೆ ಕಾರುಗಳಿಗೆ ಅವಕಾಶವಿದ್ದರೂ, ದ್ವಿಚಕ್ರ ವಾಹನಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
-
ನೈಸ್ ರಸ್ತೆ: ಇಂದು ರಾತ್ರಿ 8 ಗಂಟೆಯಿಂದಲೇ ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ನಿರ್ಬಂಧವಿರುತ್ತದೆ.
ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆ ನಿಯಮಗಳು
ಹೊಸವರ್ಷದ ಸಂಭ್ರಮಾಚರಣೆಯ ಕೇಂದ್ರಬಿಂದುವಾಗಿರುವ ಎಂ.ಜಿ. ರಸ್ತೆ ಪರಿಸರದಲ್ಲಿ ಡಿ.31ರ ರಾತ್ರಿ 8 ರಿಂದ ಬೆಳಿಗ್ಗೆ 2 ಗಂಟೆಯವರೆಗೆ ವಾಹನ ಸಂಚಾರ ಇರುವುದಿಲ್ಲ.
-
ನಿಷೇಧಿತ ರಸ್ತೆಗಳು: ಎಂ.ಜಿ. ರಸ್ತೆ (ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿವರೆಗೆ), ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ ಮತ್ತು ಸೇಂಟ್ ಮಾರ್ಕ್ಸ್ ರಸ್ತೆಗಳು ಸಂಚಾರಕ್ಕೆ ನಿಷಿದ್ಧವಾಗಿದೆ.
-
ಪಾರ್ಕಿಂಗ್ ಎಚ್ಚರಿಕೆ: ಈ ರಸ್ತೆಗಳಲ್ಲಿ ನಿಲುಗಡೆ ಮಾಡಿರುವ ವಾಹನಗಳನ್ನು ಸಂಜೆ 4 ಗಂಟೆಯೊಳಗೆ ತೆರವುಗೊಳಿಸಬೇಕು, ಇಲ್ಲದಿದ್ದರೆ ದಂಡದ ಜೊತೆಗೆ ವಾಹನಗಳನ್ನು ಟೋಯಿಂಗ್ ಮಾಡಲಾಗುವುದು.
ಮೆಟ್ರೋ ಮತ್ತು ಬಿಎಂಟಿಸಿ ವ್ಯವಸ್ಥೆ
-
ಮೆಟ್ರೋ: ರಾತ್ರಿ 10 ಗಂಟೆಯ ನಂತರ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ರೈಲು ನಿಲ್ಲುವುದಿಲ್ಲ (ಕೇವಲ ಭದ್ರತಾ ದೃಷ್ಟಿಯಿಂದ). ಪ್ರಯಾಣಿಕರು ಪರ್ಯಾಯವಾಗಿ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ನಿಲ್ದಾಣಗಳನ್ನು ಬಳಸಬೇಕು.
-
ಬಿಎಂಟಿಸಿ: ಸಂಭ್ರಮಾಚರಣೆ ಮುಗಿಸಿ ಮನೆಗೆ ಮರಳುವವರಿಗಾಗಿ ಆಯ್ದ ಮಾರ್ಗಗಳಲ್ಲಿ (ಬನ್ನೇರುಘಟ್ಟ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಕೆ.ಆರ್. ಪುರ) ತಡರಾತ್ರಿಯವರೆಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಪರ್ಯಾಯ ಮಾರ್ಗಗಳು ಮತ್ತು ಪಾರ್ಕಿಂಗ್
ವಾಹನ ಸವಾರರು ಕ್ವೀನ್ಸ್ ವೃತ್ತದ ಬದಲಿಗೆ ಸೆಂಟ್ರಲ್ ಸ್ಟ್ರೀಟ್ ಅಥವಾ ಹಲಸೂರು ರಸ್ತೆ ಮೂಲಕ ಸಂಚರಿಸಲು ಸೂಚಿಸಲಾಗಿದೆ. ಶಿವಾಜಿನಗರ ಬಿಎಂಟಿಸಿ ಕಾಂಪ್ಲೆಕ್ಸ್, ಯುಬಿ ಸಿಟಿ, ಗರುಡಾ ಮಾಲ್ ಮತ್ತು ಕಾಮರಾಜ್ ರಸ್ತೆಯಲ್ಲಿ ಸಾರ್ವಜನಿಕ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ.
ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಗರದಾದ್ಯಂತ ವಿಶೇಷ ತಪಾಸಣಾ ತಂಡಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ ಸುರಕ್ಷಿತವಾಗಿ ಹೊಸ ವರ್ಷವನ್ನ ಆಚರುಸಿಕೊಳ್ಳಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.





