ರಾಜ್ಯಾದ್ಯಂತ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಅದರ ಪರಿಣಾಮ ದಿನನಿತ್ಯದ ಆಹಾರ ಪದಾರ್ಥಗಳ ಮೇಲೂ ಕಾಣಿಸಿಕೊಳ್ಳುತ್ತಿದೆ. ವಿಶೇಷವಾಗಿ ಬೆಂಗಳೂರು, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಬೆಲೆ ಗಗನಕ್ಕೇರಿದ್ದು, ಇದು ಗ್ರಾಹಕರಿಗೆ ಶಾಕ್ ನೀಡಿದೆ. ಶೀತ ವಾತಾವರಣದ ಪರಿಣಾಮವಾಗಿ ಕೋಳಿಗಳ ಬೆಳವಣಿಗೆ ಕುಂಠಿತಗೊಂಡಿದ್ದು, ಮೊಟ್ಟೆ ಉತ್ಪಾದನೆಯೂ ಗಣನೀಯವಾಗಿ ಇಳಿಕೆಯಾಗಿದೆ. ಬೇಡಿಕೆಗೆ ತಕ್ಕ ಪೂರೈಕೆ ಲಭ್ಯವಿಲ್ಲದ ಕಾರಣ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ.
ಕೋಲಾರದಲ್ಲಿ ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಚಳಿ ವಾತಾವರಣ ಮುಂದುವರೆದಿದೆ. ಬೆಳಿಗ್ಗೆ ತಡವಾಗಿ ಬೆಳಕಾಗುವುದು, ಸಂಜೆ ಬೇಗ ಕತ್ತಲಾಗುವುದು ಹಾಗೂ ಸೂರ್ಯನ ಬಿಸಿಲಿನ ಕೊರತೆ ಕೋಳಿ ಫಾರಂಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಕೋಳಿಗಳಿಗೆ ಸಮಯಕ್ಕೆ ಸರಿಯಾಗಿ ಆಹಾರ, ನೀರು ಹಾಗೂ ಔಷಧಿ ನೀಡಿದರೂ ಸಹ, ತಾಪಮಾನ ಕಡಿಮೆಯಿರುವ ಕಾರಣ ಅವುಗಳ ದೇಹದ ಬೆಳವಣಿಗೆಗೆ ಅಗತ್ಯವಿರುವ ಉಷ್ಣತೆ ಸಿಗುತ್ತಿಲ್ಲ.
ಸಾಮಾನ್ಯವಾಗಿ 2.2 ಕೆಜಿ ತೂಕ ಬರಬೇಕಾದ ಕೋಳಿ ಸದ್ಯ ಕೇವಲ 1.7 ರಿಂದ 1.8 ಕೆಜಿ ತೂಕಕ್ಕೆ ಸೀಮಿತವಾಗುತ್ತಿದೆ ಎಂದು ಫಾರಂ ಮಾಲೀಕರು ಹೇಳ್ತಿದ್ದಾರೆ.. ಇದರಿಂದ ಮಾರುಕಟ್ಟೆಗೆ ಸರಬರಾಜಾಗುವ ಕೋಳಿ ಮಾಂಸದ ಪ್ರಮಾಣ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಮೊಟ್ಟೆ ಉತ್ಪಾದನೆಯಲ್ಲೂ ಇಳಿಕೆಯಾಗಿದ್ದು, ತಿಂಗಳಿಗೆ 28 ರಿಂದ 30 ಮೊಟ್ಟೆ ಇಡುತ್ತಿದ್ದ ಕೋಳಿಗಳು ಈಗ ಕೇವಲ 22 ರಿಂದ 24 ಮೊಟ್ಟೆಗಳಷ್ಟೇ ಇಡುತ್ತಿವೆ.
ಇದರ ಪರಿಣಾಮ ಬೆಲೆ ಏರಿಕೆಯಾಗಿ ಗ್ರಾಹಕರ ಮೇಲೆ ಬೀಳುತ್ತಿದೆ. ಕೆಲ ತಿಂಗಳ ಹಿಂದೆ 180 ರಿಂದ 200 ರೂಪಾಯಿಗೆ ಲಭ್ಯವಿದ್ದ ಒಂದು ಕೆಜಿ ಚಿಕನ್ ಬೆಲೆ ಇದೀಗ 280 ರಿಂದ 300 ರೂಪಾಯಿಗೆ ಏರಿಕೆಯಾಗಿದೆ. ಮೊಟ್ಟೆಯ ದರವೂ ಹೆಚ್ಚಾಗಿದ್ದು, ಸಾಮಾನ್ಯ ಜನರ ಬಜೆಟ್ ಮೇಲೆ ಹೊರೆ ತಂದಿದೆ.
ಬೆಲೆ ಏರಿಕೆಯಿಂದಾಗಿ ಗ್ರಾಹಕರು ಮಾಂಸ ಮತ್ತು ಮೊಟ್ಟೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. “300 ರೂಪಾಯಿ ಕೊಟ್ಟು ಚಿಕನ್ ತಿನ್ನುವ ಬದಲು ಮಟನ್ ತಿನ್ನಬಹುದಲ್ಲ” ಎಂಬ ಯೋಚನೆ ಜನರಲ್ಲಿ ಮೂಡುತ್ತಿದೆ. ಪರಿಣಾಮವಾಗಿ ಕೆಲ ಪ್ರದೇಶಗಳಲ್ಲಿ ಚಿಕನ್ ಮತ್ತು ಮೊಟ್ಟೆಗಳ ಬೇಡಿಕೆ ಇಳಿಕೆಯಾಗಿದೆ. ಇದರಿಂದ ಚಿಲ್ಲರೆ ವ್ಯಾಪಾರಿಗಳ ಮಾರಾಟಕ್ಕೂ ಪರಿಣಾಮ ಬಿದ್ದಿದೆ.
ಆದರೆ ಇನ್ನೊಂದೆಡೆ, ಕೆಲವು ಕೋಳಿ ಫಾರಂ ಮಾಲೀಕರು ಈ ಪರಿಸ್ಥಿತಿಯಿಂದ ತಮಗೆ ಹೆಚ್ಚಿನ ನಷ್ಟವಾಗಿಲ್ಲ ಎಂದು ಹೇಳುತ್ತಾರೆ. ಬೆಲೆ ಹೆಚ್ಚಿರುವುದರಿಂದ ಕಡಿಮೆ ಉತ್ಪಾದನೆಯಾದರೂ ವೆಚ್ಚವನ್ನು ಸಮತೋಲನ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.





