ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ ಬಾರ್‌ನಲ್ಲಿ ಏರ್ ಕಂಡೀಷನರ್ (ಎಸಿ) ಹಾಕಿ ಎಂದು ಕೇಳಿದ ಯುವಕನೊಬ್ಬ ತೀವ್ರ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಮಾಗಡಿ ರಸ್ತೆಯ ರಸ್ತೆಯ ಕಡಬಗೆರೆ ಕ್ರಾಸ್ ಬಳಿ ಇರುವ ವಿಲೇಜ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ.
ಮಾಚೋಹಳ್ಳಿಯ ಪುನೀತ್ (22) ಎಂಬ ಯುವಕನು ಹಲ್ಲೆಗೊಳಗಾದವನು. ಪ್ರಾಥಮಿಕ ಮಾಹಿತಿಯಂತೆ, ಬಾರ್‌ನಲ್ಲಿ ಎಸಿ ಹಾಕಲು ಕೇಳಿದ ಪುನೀತ್‌ಗೆ “ನೀನೇನು ದೊಡ್ಡ ವಿಐಪಿಯಾ?” ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಬಿಳೇಕಲ್ ನಾಗ ಹಾಗೂ ಅವನ ಸಹಚರರು ಬಿಯರ್ ಬಾಟಲ್‌ನಿಂದ ಅವನ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಪುನೀತ್‌ನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.