ಬೆಂಗಳೂರು: ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣ ಬಳಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ರಿಚ್‌ಮಂಡ್ ಸರ್ಕಲ್‌ನಿಂದ ಅತಿವೇಗವಾಗಿ ಬಂದ ಆಂಬುಲೆನ್ಸ್‌ವೊಂದು, ರೆಡ್ ಸಿಗ್ನಲ್‌ನಲ್ಲಿ ನಿಂತ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ದುರಂತದಲ್ಲಿ ಗಂಡ-ಹೆಂಡತಿ ದಂಪತಿ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಂಬುಲೆನ್ಸ್ ಒಳಗೆ ಯಾವುದೇ ರೋಗಿ ಇರಲಿಲ್ಲ ಎಂಬುದು ಘಟನೆಯನ್ನು ಇನ್ನಷ್ಟು ದಿಗ್ಭ್ರಮೆಗೊಳಿಸಿದೆ.
ಘಟನೆಯ ವಿವರ
ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ರಿಚ್‌ಮಂಡ್ ಸರ್ಕಲ್‌ನಿಂದ ಶಾಂತಿನಗರ ಕಡೆಗೆ ವೇಗವಾಗಿ ಬಂದ ಕ್ಲೌಡ್ ನೈನ್ ಆಸ್ಪತ್ರೆಯ ಆಂಬುಲೆನ್ಸ್, ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಮೊದಲು ಡಿಯೊ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಸ್ಮಾಯಿಲ್ (೪೦) ಮತ್ತು ಅವರ ಪತ್ನಿ ಸಮೀನಾ ಬಾನು ದಂಪತಿಗಳ ಮೇಲೆ ಗುದ್ದಿದೆ.
ಬೈಕ್ ಸಮೇತವೇ ಇಬ್ಬರನ್ನು ಸುಮಾರು 50 ಮೀಟರ್ ದೂರ ಎಳೆದೊಯ್ದು, ನಂತರ ಮತ್ತೆರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಪೊಲೀಸ್ ಚೌಕಿಯ ಗೋಡೆಗೆ ಗುದ್ದಿ ನಿಂತಿತು. ಈ ಏಕಾಏಕಿ ಗುದ್ದಾಟದಿಂದ ಇಸ್ಮಾಯಿಲ್ ಮತ್ತು ಸಮೀನಾ ಬಾನು ದಂಪತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಿಖಿ ಎಂಬುವವರು ಸೇರಿದಂತೆ ಇಬ್ಬರು ಗಂಭೀರ ಗಾಯಗಳಾಗಿವೆ. ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಂಬುಲೆನ್ಸ್‌ನಲ್ಲಿ ಯಾವುದೇ ತುರ್ತು ರೋಗಿ ಇರಲಿಲ್ಲ. ಸೈರನ್ ಹಾಕಿಕೊಂಡು ಅತಿವೇಗವಾಗಿ ಬಂದಿದ್ದರೂ, ಸಿಗ್ನಲ್‌ನಲ್ಲಿ ಬ್ರೇಕ್ ಹಾಕದೇ ನೇರವಾಗಿ ಬೈಕ್‌ಗಳ ಮೇಲೆ ಗುದ್ದಿದೆ. ಚಾಲಕನ ಈ ನಿರ್ಲಕ್ಷಕ್ಕೆ ಇಬ್ಬರು ಅಮಾಯಕ ಪ್ರಾಣಗಳು ಬಲಿಯಾದವು. ಅಪಘಾತದ ನಂತರ ಚಾಲಕ ವಾಹನದಿಂದ ಹೊರಬಂದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಂಬುಲೆನ್ಸ್ ಪೊಲೀಸ್ ಚೌಕಿಗೆ ಗುದ್ದಿ ನಿಂತಿದ್ದರಿಂದ, ಸ್ಥಳಕ್ಕೆ ತಕ್ಷಣ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಂತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 279 (ಅಜಾಗರೂಕ ಚಾಲನೆ), 304 ಎ (ಮರಣಕ್ಕೆ ಕಾರಣವಾಗುವ ನಿರ್ಲಕ್ಷ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಚಾಲಕನನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.





