ಬೆಂಗಳೂರು, ನವೆಂಬರ್ 19, 2025: ನಗರದ ಜಯದೇವ ಡೇರಿ ಸರ್ಕಲ್‌ನಲ್ಲಿ ಇಂದು ಮಧ್ಯಾಹ್ನ ನಡೆದ ₹7.11 ಕೋಟಿ ಬೃಹತ್ ದರೋಡೆ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆ ಉಂಟಾಗಿದೆ. ಈ ಪ್ರಕರಣಕ್ಕೆ ಒಳಗಿನ ಮಾಹಿತಿ ನೀಡಿದ್ದವರ ಬಗ್ಗೆ ಮಹತ್ವದ ಸುಳಿವು ಸಿಕ್ಕಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಘೋಷಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದರೋಡೆ ಕೇವಲ ಹೊರಗಿನ ಗ್ಯಾಂಗ್‌ನ ಕೆಲಸವಲ್ಲ. ಎಟಿಎಂಗಳಿಗೆ ಹಣ ತುಂಬಿಸುವ ಸರಿಯಾದ ಸಮಯ, ಮಾರ್ಗ, ವಾಹನದ ವಿವರ ಇವೆಲ್ಲವನ್ನೂ ಆರೋಪಿಗಳಿಗೆ ಒಳಗಿನಿಂದಲೇ ಯಾರೋ ಮಾಹಿತಿ ಕೊಟ್ಟಿದ್ದಾರೆ. ಆ ವ್ಯಕ್ತಿ ಅಥವಾ ವ್ಯಕ್ತಿಗಳ ಬಗ್ಗೆ ಈಗಾಗಲೇ ಗಂಭೀರ ಸುಳಿವು ದೊರೆತಿದೆ. ತನಿಖೆ ತೀವ್ರಗತಿಯಲ್ಲಿದೆ. ಯಾರೇ ಆಗಲಿ, ಎಷ್ಟೇ ದೊಡ್ಡವರೇ ಆಗಲಿ ಬಿಡುವುದಿಲ್ಲ, ಹಿಡಿಯುತ್ತೇವೆ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಗಲೊತ್ತಲ್ಲೇ ಇಂತಹ ದೊಡ್ಡ ದರೋಡೆ ಇದುವರೆಗೆ ನಡೆದಿರಲಿಲ್ಲ. ₹7.11 ಕೋಟಿ ರೂಪಾಯಿ ಇದು ಸಾಮಾನ್ಯ ಕೃತ್ಯವಲ್ಲ. ಆರೋಪಿಗಳು ಬಳಸಿದ ಎರಡು ಬಿಳಿ ಇನ್ನೋವಾ ಕಾರುಗಳ ಸಂಖ್ಯೆ, ಚಾಲಕರ ವಿವರ, ಎಸ್ಕೇಪ್ ರೂಟ್ ಎಲ್ಲವೂ ಪೊಲೀಸರ ಕೈಯಲ್ಲಿದೆ. ಈ ಗ್ಯಾಂಗ್ ಸ್ಥಳೀಯರಾ ಅಥವಾ ಹೊರ ರಾಜ್ಯದವರಾ ಎಂಬುದೂ ತನಿಖೆಯಲ್ಲಿದೆ. ಆದರೆ ಒಳಗಿನ ಮಾಹಿತಿ ಇಲ್ಲದೇ ಇಷ್ಟು ಪರ್ಫೆಕ್ಟ್ ಆಗಿ ದರೋಡೆ ನಡೆಸಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ಒತ್ತಿ ಹೇಳಿದರು.
ಕ್ಯಾಶ್ ವ್ಯಾನ್ ಸಿಬ್ಬಂದಿಯ ವಿಚಾರಣೆಯೂ ತೀವ್ರಗೊಂಡಿದೆ. ದರೋಡೆ ನಡೆದ ಬಳಿಕ ಒಂದು ಗಂಟೆ ತಡವಾಗಿ ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿರುವುದು, ಗನ್‌ಮ್ಯಾನ್‌ಗಳು ಒಂದೇ ರೌಂಡ್ ಗುಂಡು ಹಾರಿಸದಿರುವುದು ಈ ಎಲ್ಲಾ ಅಂಶಗಳು ಒಳಗಿನ ಒಡನಾಟದ ಅನುಮಾನಕ್ಕೆ ಬಲ ನೀಡಿವೆ.
ತನಿಖೆಗೆ ಅಡ್ಡಿಯಾಗದಂತೆ ಎಲ್ಲಾ ವಿವರಗಳನ್ನು ಈಗ ಬಹಿರಂಗಪಡಿಸುವುದಿಲ್ಲ. ಆದರೆ ಜನತೆಗೆ ನನ್ನ ಭರವಸೆ – ಈ ಪ್ರಕರಣ ಯಾರೇ ಇದ್ದರೂ ಬಯಲು ಮಾಡುತ್ತೇವೆ. ಆರೋಪಿಗಳನ್ನು ಒಂದೇ ಒಂದು ದಿನದಲ್ಲೂ ಬಂಧಿಸುತ್ತೇವೆ” ಎಂದು ಪರಮೇಶ್ವರ ಅವರು ದೃಢವಾಗಿ ಹೇಳಿದರು.
ಈ ಘಟನೆಯು ಬೆಂಗಳೂರಿನ ಭದ್ರತಾ ವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದೆ. ಎಟಿಎಂ ಕ್ಯಾಶ್ ರೀಫಿಲ್ ವಾಹನಗಳ ಸುರಕ್ಷತೆ, ಒಳಗಿನ ಸಿಬ್ಬಂದಿಯ ವಿಶ್ವಾಸಾರ್ಹತೆ ಮತ್ತು ನಗರದಲ್ಲಿ ಹಗಲಿನ ದರೋಡೆ ಸಾಧ್ಯತೆಗಳ ಬಗ್ಗೆ ಚರ್ಚೆಗೆ ಒಡ್ಡಿದೆ. ಪೊಲೀಸ್ ಆಯುಕ್ತರು ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಈ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಎಟಿಎಂ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ರಾಜ್ಯ ಸರ್ಕಾರಕ್ಕೆ ತಲೆನೋವು ಉಂಟುಮಾಡಿದೆ. ಜನರು ತಮ್ಮ ಹಣದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಟಿಎಂ ಕಂಪನಿಗಳು ಮತ್ತು ಬ್ಯಾಂಕ್‌ಗಳು ತಮ್ಮ ಸುರಕ್ಷಾ ವ್ಯವಸ್ಥೆಯನ್ನು ಬಲಪಡಿಸುವಂತೆ ಸರ್ಕಾರ ಸೂಚಿಸಿದೆ.





