ಬೆಂಗಳೂರು: ವನ್ಯಜೀವಿ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಸಂತಸದ ಸುದ್ದಿ ಸಿಕ್ಕಿದೆ. ಮಾನವ-ವನ್ಯಜೀವಿ ಸಂಘರ್ಷದ ಹಿನ್ನೆಲೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ಜಂಗಲ್ ಸಫಾರಿಯನ್ನು ಮತ್ತೆ ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ.
ತಜ್ಞರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವೈಜ್ಞಾನಿಕ ಮೌಲ್ಯಮಾಪನ, ಪರಿಸರ ಸಂರಕ್ಷಣೆ ಮತ್ತು ಸಾಗಣೆ ಸಾಮರ್ಥ್ಯವನ್ನು ಪರಿಗಣಿಸಿ ಸಫಾರಿ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ಸಮಿತಿಯ ಶಿಫಾರಸಿನಂತೆ ನಿಯಂತ್ರಿತ ಹಾಗೂ ಸುರಕ್ಷಿತ ರೀತಿಯಲ್ಲಿ ಸಫಾರಿ ನಡೆಸಲಾಗಲಿದ್ದು, ಈ ನಿರ್ಧಾರದಿಂದ ಸ್ಥಳೀಯ ಪ್ರವಾಸೋದ್ಯಮ, ಉದ್ಯೋಗಾವಕಾಶ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯುವ ನಿರೀಕ್ಷೆಯಿದೆ.
ಏಕೆ ಸ್ಥಗಿತಗೊಳಿಸಲಾಗಿತ್ತು ಸಫಾರಿ?
2025ರ ನವೆಂಬರ್‌ನಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಂಗಲ್ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಪರಿಸ್ಥಿತಿಯ ಅಧ್ಯಯನಕ್ಕಾಗಿ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದ್ದು, ಅದರ ಮಧ್ಯಂತರ ವರದಿಯ ಆಧಾರದ ಮೇಲೆ 2026ರ ಫೆಬ್ರವರಿ 19ರಿಂದ ಶೇ.50ರ ಸಾಮರ್ಥ್ಯದಲ್ಲಿ ಹಾಗೂ ಕಡಿಮೆ ಅವಧಿಯ ಸಫಾರಿಗೆ ಸರ್ಕಾರ ಅವಕಾಶ ನೀಡಿತ್ತು.
ಈ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಿ, ಅಂತಿಮ ವರದಿ ಬರುವವರೆಗೆ ಸೀಮಿತ ಪ್ರಮಾಣದಲ್ಲಿ ಮಾತ್ರ ಸಫಾರಿ ನಡೆಸಲು ನಿರ್ಧರಿಸಲಾಗಿತ್ತು. ಅಂದಿನ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪೂರ್ಣ ಪ್ರಮಾಣದ ಅನುಮತಿ ಅಂತಿಮ ವರದಿ ಬಳಿಕ ನೀಡಲಾಗುವುದು ಎಂದು ತಿಳಿಸಿದ್ದರು.
ಸಫಾರಿಗೆ ವಿಧಿಸಲಾಗಿದ್ದ ನಿರ್ಬಂಧಗಳು
ಶೇ.50ರಷ್ಟು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಜೊತೆಗೆ ಸಫಾರಿ ಅವಧಿಯನ್ನೂ ಕಡಿತಗೊಳಿಸಲಾಗಿತ್ತು. ಬಂಡೀಪುರದಲ್ಲಿ 8 ಗಂಟೆಗಳ ಬದಲು 5 ಗಂಟೆ, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆಗಳ ಕಾಲ ಮಾತ್ರ ಸಫಾರಿ ನಡೆಸಲು ಅನುಮತಿ ನೀಡಲಾಗಿತ್ತು.
ಈಗ ಮತ್ತೆ ಸಂಪೂರ್ಣ ಸಫಾರಿ
ಈಗ ತಾಂತ್ರಿಕ ಸಮಿತಿಯ ಅಂತಿಮ ಶಿಫಾರಸು ಮತ್ತು ವೈಜ್ಞಾನಿಕ ಮೌಲ್ಯಮಾಪನದ ಆಧಾರದ ಮೇಲೆ ಸರ್ಕಾರ ಪೂರ್ಣ ಪ್ರಮಾಣದ ಜಂಗಲ್ ಸಫಾರಿಗೆ ಅನುಮತಿ ನೀಡಿದೆ. ಇದರಿಂದ ರಾಜ್ಯದ ಪ್ರಮುಖ ವನ್ಯಜೀವಿ ಪ್ರವಾಸಿ ತಾಣಗಳಾದ ಬಂಡೀಪುರ ಮತ್ತು ನಾಗರಹೊಳೆಗಳಲ್ಲಿ ಮತ್ತೆ ಮೊದಲಿನಂತೆ ಪ್ರವಾಸಿಗರು ಸಂಪೂರ್ಣ ಸಫಾರಿಯ ಅನುಭವ ಪಡೆಯಲಿದ್ದು, ವನ್ಯಜೀವಿ ಪ್ರಿಯರಲ್ಲಿ ಸಂತಸ ಮೂಡಿದೆ.
ಬಂಡೀಪುರ ಹಾಗೂ ನಾಗರಹೊಳೆ ಜಂಗಲ್ ಸಫಾರಿ ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿ ಅವು ಕೃಷಿ ಭೂಮಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ ಎಂದು ಆರೋಪಿಸಿದ್ದ ಸ್ಥಳೀಯ ರೈತರು ಸಫಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಫಾರಿ ಮಾರ್ಗಗಳಲ್ಲೇ ಪ್ರತಿಭಟನೆ ನಡೆಸಿ, ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಸಫಾರಿ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದರು.
ಇನ್ನೊಂದೆಡೆ, ಸಫಾರಿ ಸ್ಥಗಿತದಿಂದ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ ಎಂದು ಸ್ಥಳೀಯ ರೆಸಾರ್ಟ್, ಹೋಂಸ್ಟೇ ಹಾಗೂ ವ್ಯಾಪಾರಸ್ಥರು ಸರ್ಕಾರದ ಕ್ರಮವನ್ನು ವಿರೋಧಿಸಿದ್ದರು. ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದ ಪರಿಣಾಮ ಉದ್ಯಮಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಶೀಘ್ರದಲ್ಲೇ ಸಫಾರಿಯನ್ನು ಪುನರಾರಂಭಿಸಬೇಕೆಂದು ಆಗ್ರಹಿಸಿದ್ದರು.
ಈ ಬೆಳವಣಿಗೆಗಳ ನಡುವೆ ಅರಣ್ಯ ಇಲಾಖೆ ತಜ್ಞರ ಸಮಿತಿಯಿಂದ ಸಮಗ್ರ ಅಧ್ಯಯನ ನಡೆಸಿ ವರದಿ ಪಡೆದುಕೊಂಡಿತ್ತು. ವರದಿಯಲ್ಲಿ ಕಾಡು ಪ್ರಾಣಿಗಳು ರೈತರ ಕೃಷಿ ಭೂಮಿಗೆ ನುಗ್ಗಿ ಹಾನಿ ಮಾಡುವುದಕ್ಕೂ ಜಂಗಲ್ ಸಫಾರಿಗೂ ನೇರ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿತ್ತು.
ಈ ವರದಿಯ ಆಧಾರದ ಮೇಲೆ ಮೊದಲ ಹಂತದಲ್ಲಿ ಸೀಮಿತ ಪ್ರಮಾಣದಲ್ಲಿ ಸಫಾರಿ ಆರಂಭಿಸಲಾಗಿತ್ತು. ಆದರೆ ಸಂಪೂರ್ಣ ಪ್ರಮಾಣದ ಸಫಾರಿಗೆ ಇನ್ನೂ ಅನುಮತಿ ನೀಡಲಾಗಿರಲಿಲ್ಲ. ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅರಣ್ಯ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ತಾಂತ್ರಿಕ ಸಮಿತಿಯ ಅಂತಿಮ ಶಿಫಾರಸುಗಳನ್ನು ಪರಿಶೀಲಿಸಿದ ಬಳಿಕ, ಬಂಡೀಪುರ ಮತ್ತು ನಾಗರಹೊಳೆಗಳಲ್ಲಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿಗೆ ಸರ್ಕಾರ ಅಧಿಕೃತ ಅನುಮತಿ ನೀಡಿದೆ.





