ಬಳ್ಳಾರಿ, ಡಿ.2: ಬಳ್ಳಾರಿ ಫೈರಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಶಾಸಕ ಭರತ್ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜನಾರ್ದನ ರೆಡ್ಡಿ ನೀಚ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ವಾಲ್ಮೀಕಿ ಪುತ್ಥಳಿ ಸ್ಥಾಪನೆ ಕಾರ್ಯಕ್ರಮವನ್ನು ನಿಲ್ಲಿಸುವ ಉದ್ದೇಶದಿಂದಲೇ ಉದ್ದೇಶಪೂರ್ವಕವಾಗಿ ಗಲಾಟೆ ಸೃಷ್ಟಿಸಲಾಗಿದೆ ಎಂದು ಕಿಡಿಕಾರಿದರು.
ಶುಕ್ರವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಭರತ್ ರೆಡ್ಡಿ, “ಜನಾರ್ದನ ರೆಡ್ಡಿ ಅವರ ಮನೆಯ ಮುಂದೆ ಯಾವುದೇ ಬ್ಯಾನರ್ ಹಾಕಿಲ್ಲ. ಅದು ಸಾರ್ವಜನಿಕ ಸ್ಥಳ. ಆದರೆ ಬೇಕಂತಲೇ ತಮ್ಮ ಮನೆಯ ಮುಂದೆ ಬ್ಯಾನರ್ ಹಾಕಿದ್ದಾರೆ ಎಂದು ಆರೋಪಿಸಿ ಗಲಾಟೆ ಎಬ್ಬಿಸುತ್ತಿದ್ದಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಕೃತ್ಯ” ಎಂದು ಹೇಳಿದರು.
ಗುಂಡಿನ ದಾಳಿಯಲ್ಲಿ ನಮ್ಮ ಕಾರ್ಯಕರ್ತ ರಾಜಶೇಖರ ಮೃತಪಟ್ಟಿರುವುದು ನಮ್ಮೆಲ್ಲರಿಗೂ ಆಘಾತ ತಂದಿದೆ. ಆ ನೋವಿನ ನಡುವೆಯೂ ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
“ಈ ಘಟನೆಯಲ್ಲಿ ಒಬ್ಬ ನಿರಪರಾಧ ಕಾರ್ಯಕರ್ತ ದ್ವೇಷದ ರಾಜಕೀಯಕ್ಕೆ ಬಲಿಯಾಗಿದ್ದಾನೆ. ಮೃತ ರಾಜಶೇಖರ ಕುಟುಂಬಕ್ಕೆ ಸರ್ಕಾರದಿಂದ ಹಾಗೂ ನನ್ನ ವೈಯಕ್ತಿಕವಾಗಿ ಪರಿಹಾರ ನೀಡಲಾಗುವುದು. ಈ ವಿಷಯದಲ್ಲಿ ಸರ್ಕಾರ ನಮ್ಮೊಂದಿಗೆ ನಿಂತಿದೆ. ಉಪಮುಖ್ಯಮಂತ್ರಿ (ಡಿಸಿಎಂ) ನನ್ನೊಂದಿಗೆ ಮಾತನಾಡಿ ಸಂಪೂರ್ಣ ಬೆಂಬಲ ಹಾಗೂ ಭರವಸೆ ನೀಡಿದ್ದಾರೆ” ಎಂದು ಭರತ್ ರೆಡ್ಡಿ ತಿಳಿಸಿದರು.
“ಜನಾರ್ದನ ರೆಡ್ಡಿ ಏನು ಅನ್ನೋದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತು. ಈಗಾಗಲೇ ಒಂದು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದಾರೆ. ಇದೀಗ ಗಡಿ ಒತ್ತುವರಿ ಪ್ರಕರಣದಲ್ಲಿಯೂ ಶಿಕ್ಷೆಯಾಗುವುದು ಬಹುತೇಕ ಖಚಿತ. ಈ ಎಲ್ಲಾ ವಿಚಾರಗಳಿಂದ ಜನರ ಗಮನ ತಿರುಗಿಸಲು ಈ ರೀತಿ ಗಲಾಟೆ ಸೃಷ್ಟಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಆಂಧ್ರಪ್ರದೇಶ ಅಥವಾ ತೆಲಂಗಾಣದಿಂದ ಎಷ್ಟು ಜನರನ್ನು ಕರೆಸಿಕೊಂಡರೂ ನಮಗೆ ಯಾವುದೇ ಭಯವಿಲ್ಲ. ವಾಲ್ಮೀಕಿ ಸಮುದಾಯದ ಗೌರವಕ್ಕಾಗಿ ನಡೆಯುತ್ತಿರುವ ಕಾರ್ಯಕ್ರಮವನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿನ ಶಾಂತಿ ಭಂಗಗೊಳಿಸುವ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು. “ಈ ರೀತಿಯ ಹಿಂಸಾತ್ಮಕ ರಾಜಕೀಯಕ್ಕೆ ಅಂತ್ಯ ಹಾಡಬೇಕು. ಜನರ ಜೀವಕ್ಕೆ ಬೆಲೆ ಕೊಡದ ರಾಜಕೀಯವನ್ನು ಜನರು ತಿರಸ್ಕರಿಸುತ್ತಾರೆ” ಎಂದು ಭರತ್ ರೆಡ್ಡಿ ಹೇಳಿದರು.
ಇಡೀ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನಮಗೆ ಇದೆ. ಯಾವುದೇ ಒತ್ತಡಕ್ಕೂ ನಾವು ಮಣಿಯುವುದಿಲ್ಲ. ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮ ನಿಗದಿಯಂತೆ ನಡೆಯುತ್ತದೆ ಎಂದು ಶಾಸಕ ಭರತ್ ರೆಡ್ಡಿ ತಿಳಿಸಿದರು.





