ತುಮಕೂರು, ಜ.03: ಬಳ್ಳಾರಿಯಲ್ಲಿ ವಾಲ್ಮೀಕಿ ಜಯಂತಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆ ಹಾಗೂ ಪೊಲೀಸ್ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ಅಮಾನತುಗೊಂಡಿದ್ದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪವನ್ ನಜ್ಜೂರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದು ಸುಳ್ಳು ವದಂತಿ ಎಂದು ತಿಳಿದುಬಂದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬರಗೂರಿನಲ್ಲಿರುವ ಸ್ನೇಹಿತನ ಫಾರ್ಮ್‌ಹೌಸ್‌ನಲ್ಲಿ ಪವನ್ ನಜ್ಜೂರು ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದು ಸುಳ್ಳು ವದಂತಿ ಎಂದು ಸ್ಪಷ್ಟವಾಗಿದೆ.
ಹೊಸ ವರ್ಷದ ಎರಡನೇ ದಿನವಾದ ಜನವರಿ 2ರಂದು ಬಳ್ಳಾರಿಯಲ್ಲಿ ವಾಲ್ಮೀಕಿ ಬ್ಯಾನರ್ ತೆರವು ವಿಚಾರವಾಗಿ ಉದ್ವಿಗ್ನತೆ ಉಂಟಾಗಿತ್ತು. ಈ ವೇಳೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಫೈರಿಂಗ್ ನಡೆದಿದ್ದು, ಓರ್ವ ಕಾಂಗ್ರೆಸ್ ಕಾರ್ಯಕರ್ತ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆ ರಾಜ್ಯದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಗಲಭೆ ನಿಯಂತ್ರಣ ಹಾಗೂ ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರ ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದವು.
ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದಡಿ ಬಳ್ಳಾರಿ ಎಸ್‌ಪಿ ಪವನ್ ನಜ್ಜೂರು ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಘಟನೆಯ ಸಂದರ್ಭದಲ್ಲಿ ಸರಿಯಾದ ಕ್ರಮ ಕೈಗೊಳ್ಳಲಿಲ್ಲ, ಹಿರಿಯ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಲಿಲ್ಲ ಎಂಬ ಆರೋಪಗಳು ಅವರ ವಿರುದ್ಧ ಕೇಳಿಬಂದಿದ್ದವು.
ಈ ವರದಿ ಆಧರಿಸಿ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು ಪವನ್ ನಜ್ಜೂರು ಅಮಾನತು ಶಿಫಾರಸು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಪವನ್ ನಜ್ಜೂರು ಅವರನ್ನು ಅಮಾನತು ಮಾಡಿತ್ತು.
ಪವನ್ ನಜ್ಜೂರು ಅವರು ಜನವರಿ 1ರಂದು ಬಳ್ಳಾರಿ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಶೋಭಾರಾಣಿ ಅವರಿಂದ ಅಧಿಕಾರ ಹಸ್ತಾಂತರವಾದ ಮರುದಿನವೇ ಗಲಭೆ ನಡೆದಿದ್ದು, ಗಲಾಟೆಯ ವೇಳೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದನು. ಕೇವಲ ಒಂದು ದಿನದಲ್ಲೇ ಅವರು ಅಮಾನತುಗೊಂಡಿದ್ದರು.
ಅಮಾನತು ಬಳಿಕ ಪವನ್ ನಜ್ಜೂರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಇದರ ನಡುವೆಯೇ ಆತ್ಮಹತ್ಯೆ ಯತ್ನಿಸಿದ ಸುದ್ದಿ ಹೊರಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹಾಗೂ ಸರ್ಕಾರದಿಂದ ಅಧಿಕೃತ ಹೇಳಿಕೆ ಬರಬೇಕಿದೆ.





