ಬಳ್ಳಾರಿ (ಮಾ.13): ರಾಷ್ಟ್ರಗೀತೆ ಎಂದರೆ ಭಾರತೀಯರೆಲ್ಲರ ಹೆಮ್ಮೆಯ ಸಂಕೇತ. ಅದನ್ನು ಯಾವಾಗ, ಎಲ್ಲಿ ಮತ್ತು ಯಾವ ಸಂದರ್ಭದಲ್ಲಿ ಹಾಡಬೇಕು ಎಂಬ ನಿರ್ದಿಷ್ಟ ನಿಯಮಗಳಿವೆ. ಆದರೆ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು ಈ ನಿಯಮವನ್ನೇ ಮೀರಿ ವಿಚಿತ್ರ ಎಡವಟ್ಟು ಮಾಡಿಕೊಂಡಿದ್ದಾರೆ. ವೃದ್ಧೆಯೊಬ್ಬರ ಮೃತದೇಹದ ಮುಂದೆ ತಮ್ಮ ಶಾಲಾ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ರಾಷ್ಟ್ರಗೀತೆ ಹಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಕುರಿತು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತಿಮ ದರ್ಶನ ವೇಳೆ ರಾಷ್ಟ್ರಗೀತೆ
ಈ ಘಟನೆ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ನಡೆದಿದೆ. ಜನವರಿ 28ರಂದು ಗ್ರಾಮದಲ್ಲಿ ಸಣ್ಣಕ್ಕಿ ಕಾಮಾಕ್ಷಮ್ಮ ಎಂಬ ವೃದ್ಧೆಯವರು ನಿಧನರಾಗಿದ್ದರು. ಅಂತಿಮ ದರ್ಶನಕ್ಕೆ ಗ್ರಾಮಸ್ಥರು ಹಾಗೂ ಬಂಧುಬಳಗದವರು ಸೇರಿಕೊಂಡಿದ್ದ ವೇಳೆ, ಗ್ರಾಮದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯ ಅಧ್ಯಕ್ಷರೂ ಆಗಿರುವ ಮುಖ್ಯ ಶಿಕ್ಷಕ ಎಂ. ಹನುಮಂತಪ್ಪ ಅವರು ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಅಲ್ಲಿಗೆ ಕರೆತಂದಿದ್ದಾರೆ.
ವಿದ್ಯಾರ್ಥಿಗಳನ್ನು ಮೃತದೇಹದ ಮುಂದೆ ಸಾಲಾಗಿ ನಿಲ್ಲಿಸಿ, ಅವರಿಂದ ರಾಷ್ಟ್ರಗೀತೆ ‘ಜನಗಣಮನ’ ಹಾಡಿಸುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ದೃಶ್ಯವನ್ನು ಕಂಡ ಕೆಲ ಗ್ರಾಮಸ್ಥರು ಅಚ್ಚರಿಗೊಂಡಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ..
ರಾಷ್ಟ್ರಗೀತೆ ಯಾವ ಸಂದರ್ಭಗಳಲ್ಲಿ ಹಾಡಬೇಕು ಎಂಬುದಕ್ಕೆ ಸರ್ಕಾರ ಹಾಗೂ ನ್ಯಾಯಾಲಯದ ಮಾರ್ಗಸೂಚಿಗಳಿವೆ. ಸಾಮಾನ್ಯವಾಗಿ ರಾಷ್ಟ್ರಗೀತೆಯನ್ನು ರಾಷ್ಟ್ರೀಯ ಹಬ್ಬಗಳು, ಅಧಿಕೃತ ಕಾರ್ಯಕ್ರಮಗಳು ಅಥವಾ ಗೌರವಯುತ ಸಮಾರಂಭಗಳಲ್ಲಿ ಮಾತ್ರ ಹಾಡಲಾಗುತ್ತದೆ. ಆದರೆ ಶವ ಸಂಸ್ಕಾರ ಅಥವಾ ಅಂತಿಮ ದರ್ಶನದ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಡಿಸುವುದು ಸರಿಯಲ್ಲ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಾಂಶುಪಾಲರು ನಿಯಮಗಳನ್ನು ಲೆಕ್ಕಿಸದೇ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡಿದ್ದಾರೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ. ಜನವರಿ 28ರಂದು ನಡೆದ ಈ ಘಟನೆ ತಕ್ಷಣವೇ ಬಹಿರಂಗವಾಗಿರಲಿಲ್ಲ. ಆದರೆ ಬಳಿಕ ಗ್ರಾಮದ ಕೆಲವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಫೆಬ್ರವರಿ 16ರಂದು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಬಳ್ಳಾರಿ ಜಿಲ್ಲಾಧಿಕಾರಿ (DC), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹಾಗೂ ಶಾಲಾ ಶಿಕ್ಷಣ ಇಲಾಖೆಗೆ ಲಿಖಿತ ದೂರು ಸಲ್ಲಿಸಲಾಗಿದೆ.
ದೂರಿನಲ್ಲಿ ಪ್ರಾಂಶುಪಾಲರು ರಾಷ್ಟ್ರಗೀತೆಯನ್ನು ತಪ್ಪಾದ ಸಂದರ್ಭದಲ್ಲಿ ಹಾಡಿಸಿದ್ದು ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ. ಜೊತೆಗೆ, ಮಕ್ಕಳನ್ನು ಅಂತಿಮ ಸಂಸ್ಕಾರದ ಸ್ಥಳಕ್ಕೆ ಕರೆತಂದು ಈ ರೀತಿಯಾಗಿ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ಕೂಡ ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮಸ್ಥರ ದೂರಿನ ಆಧಾರದ ಮೇಲೆ ಶಿಕ್ಷಣ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಸಂಬಂಧಿತ ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರಿಂದ ವಿವರ ಕೇಳಿದ್ದಾರೆ. ನಂತರ ಪ್ರಾಂಶುಪಾಲ ಎಂ. ಹನುಮಂತಪ್ಪ ಅವರು ಶಿಕ್ಷಣ ಇಲಾಖೆಯ ಮುಂದೆ ಕ್ಷಮೆಯಾಚಿಸಿರುವುದಾಗಿ ತಿಳಿದುಬಂದಿದೆ.




