ಬಳ್ಳಾರಿ : ಬಳ್ಳಾರಿ ನಗರದಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆ ಹಾಗೂ ಫೈರಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮತ್ತಿಬ್ಬರು ಖಾಸಗಿ ಗನ್‌ಮ್ಯಾನ್‌ಗಳನ್ನು ಬಂಧಿಸಿದ್ದಾರೆ.
ಶಾಸಕ ಜನಾರ್ಧನ ರೆಡ್ಡಿ ಅವರ ನಿವಾಸದ ಮುಂದೆ ಬ್ಯಾನರ್ ಕಟ್ಟುವ ವಿಚಾರವೇ ಈ ಭೀಕರ ಘಟನೆಗೆ ಕಾರಣವಾಗಿತ್ತು. ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಜನಾರ್ಧನ ರೆಡ್ಡಿ ಅವರ ಮನೆಯ ಎದುರು ಬ್ಯಾನರ್ ಅಳವಡಿಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಕ್ಷಣಾರ್ಧದಲ್ಲೇ ಗಲಾಟೆಗೆ ತಿರುಗಿತ್ತು. ಈ ವೇಳೆ ಪರಿಸ್ಥಿತಿ ನಿಯಂತ್ರಣ ತಪ್ಪಿ ಫೈರಿಂಗ್ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಎಂಬುವರು ಗುಂಡೇಟಿಗೆ ಬಲಿಯಾದರು.
ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ಈಗಾಗಲೇ ಈ ಪ್ರಕರಣದಲ್ಲಿ 26 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೀಗ ಸಿಐಡಿ ಪೊಲೀಸರು ಖಾಸಗಿ ಗನ್‌ಮ್ಯಾನ್‌ಗಳಾದ ಬರೀತ್ ಸಿಂಗ್ ಮತ್ತು ಬಲ್ಕಿನಂದರ್ ಸಿಂಗ್ ಅವರನ್ನು ಬಂಧಿಸಿ ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಈ ಮೊದಲು ಬಳ್ಳಾರಿ ಪೊಲೀಸರು ನಡೆಸಿದ ತನಿಖೆಯಲ್ಲಿ ಮೂವರು ಖಾಸಗಿ ಗನ್‌ಮ್ಯಾನ್‌ಗಳು, 10 ಮಂದಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು 10 ಮಂದಿ ಬಿಜೆಪಿ ಕಾರ್ಯಕರ್ತರು ಸೇರಿ ಒಟ್ಟು 26 ಜನರನ್ನು ಬಂಧಿಸಿದ್ದರು. ಬಂಧಿತರ ವಿರುದ್ಧ ಕೊಲೆ, ಗಲಾಟೆ, ಅಕ್ರಮ ಶಸ್ತ್ರಾಸ್ತ್ರ ಬಳಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ದಾಖಲಿಸಲಾಗಿದೆ.
ಸಿಐಡಿ ಅಧಿಕಾರಿಗಳು ಫೈರಿಂಗ್‌ಗೆ ಬಳಸಲಾದ ಶಸ್ತ್ರಾಸ್ತ್ರ, ಗನ್‌ಮ್ಯಾನ್‌ಗಳ ನಿಯೋಜನೆ, ಯಾರ ಸೂಚನೆ ಮೇರೆಗೆ ಗುಂಡಿನ ದಾಳಿ ನಡೆದಿದೆ ಎಂಬ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಖಾಸಗಿ ಭದ್ರತಾ ಸಿಬ್ಬಂದಿಗೆ ಶಸ್ತ್ರಾಸ್ತ್ರ ಬಳಸುವ ಅಧಿಕಾರ, ನಿಯಮಾವಳಿ ಉಲ್ಲಂಘನೆಗಳ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರ ಪಾತ್ರ ಇರುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬಂಧನವಾಗುವ ಸೂಚನೆಗಳಿವೆ.





