ಬಾಗಲಕೋಟೆ: ಪತಿಯೊಬ್ಬ ತನ್ನ ಪತ್ನಿಯ ಅರ್ಧ ತಲೆ ಬೋಳಿಸಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿದೆ. ಪತಿ-ಪತ್ನಿಯ ನಡುವಿನ ಕೌಟುಂಬಿಕ ಕಲಹವು ತಾರಕಕ್ಕೇರಿ, ಪತಿ ಬಸಪ್ಪ ತನ್ನ ಪತ್ನಿ ಶ್ರೀದೇವಿಯ ದೇವರವರ ಅರ್ಧ ತಲೆಯನ್ನು ಬೋಳಿಸಿ ದೌರ್ಜನ್ಯವೆಸಗಿದ್ದಾನೆ.
ಈ ಘಟನೆಯಲ್ಲಿ ಬಸಪ್ಪನೊಂದಿಗೆ ಗ್ರಾಮದ ಹಿರಿಯ ಸದಾಶಿವ ನ್ಯಾಮಗೌಡ ಕೂಡ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ದುಷ್ಕೃತ್ಯದಿಂದ ಶ್ರೀದೇವಿ ದೇವರವರ ಮೇಲೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದು, ಆಕೆ ಸದ್ಯ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಶ್ರೀದೇವಿ ಮತ್ತು ಬಸಪ್ಪ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಬಸಪ್ಪ ತಾನು ಉದ್ಯೋಗದಲ್ಲಿದ್ದೇನೆ ಎಂದು ಸುಳ್ಳು ಹೇಳಿ ಶ್ರೀದೇವಿಯನ್ನು ಮದುವೆಯಾಗಿದ್ದ. ಈ ಸುಳ್ಳಿನಿಂದ ಕೋಪಗೊಂಡ ಶ್ರೀದೇವಿಯ ತಾಯಿ, ಅಳಿಯನಿಗೆ ತಲೆ ಬೋಳಿಸುವುದಾಗಿ ಹೇಳಿದ್ದಳು. ಇದೇ ಕಾರಣಕ್ಕೆ ಶ್ರೀದೇವಿ ಮತ್ತು ಬಸಪ್ಪನ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಕಳೆದ ಎರಡು ವರ್ಷಗಳಿಂದ ಶ್ರೀದೇವಿ ತನ್ನ ತವರು ಮನೆಯಾದ ಬಾಗಲಕೋಟೆ ತಾಲೂಕಿನ ಸಿಂದಗಿಯಲ್ಲಿ ವಾಸಿಸುತ್ತಿದ್ದಳು. ಜಿಲ್ಲಾ ಸಖಿ ತಂಡವು ಈ ದಂಪತಿಗೆ ಕೌನ್ಸೆಲಿಂಗ್ ನಡೆಸಿ, ಎರಡು ತಿಂಗಳ ಹಿಂದೆ ಶ್ರೀದೇವಿಯನ್ನು ಪತಿಯ ಮನೆಗೆ ಕಳುಹಿಸಿತ್ತು. ಆದರೆ, ಕುಡಿತದ ಚಟಕ್ಕೆ ಬಿದ್ದಿದ್ದ ಬಸಪ್ಪ ತನ್ನ ದಿನನಿತ್ಯದ ಜಗಳವನ್ನು ಮುಂದುವರೆಸಿದನು. ಸೆಪ್ಟೆಂಬರ್ 7 ರ ರಾತ್ರಿ, ಕುಡಿದ ಮತ್ತಿನಲ್ಲಿ ಗಲಾಟೆಗೆ ಇಳಿದ ಬಸಪ್ಪ, ಶ್ರೀದೇವಿಯ ಅರ್ಧ ತಲೆಯನ್ನು ಬೋಳಿಸಿದ್ದಾನೆ.
ಈ ಘಟನೆಯಿಂದ ಶ್ರೀದೇವಿ ಗಂಭೀರ ಮಾನಸಿಕ ಆಘಾತಕ್ಕೊಳಗಾಗಿದ್ದು, ಆಕೆಯನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿದ್ಧಾರ್ಥ್ ಗೋಯಲ್, ಕುಟುಂಬಸ್ಥರ ದೂರಿನ ಆಧಾರದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
 
			
 
					




 
                             
                             
                             
                             
                            