ಬೆಳಗಾವಿ, ನವೆಂಬರ್ 21: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಗುರುವಾರ ಭಯಾನಕ ದುರಂತ ನಡೆದಿದೆ. ಕಬ್ಬು ಕಟಾವು ಮಾಡುತ್ತಿದ್ದ ಬೃಹತ್ ಹಾರ್ವೆಸ್ಟರ್ ಯಂತ್ರಕ್ಕೆ ಸಿಲುಕಿ ಸ್ಥಳದಲ್ಲೇ ಮಹಿಳೆ ದಾರುಣವಾಗಿ ಮೃತಪಟ್ಟಿದ್ದಾರೆ. 54 ವರ್ಷದ ಶೋಭಾ ಶ್ರೀಕಾಂತ ಸಂಕ್ರಟ್ಟಿ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮದೇ ಜಮೀನಿನಲ್ಲಿ ಯಂತ್ರದಿಂದ ಕಬ್ಬು ಕಟಾವು ನಡೆಯುತ್ತಿತ್ತು. ಶೋಭಾ ಯಂತ್ರದ ಹಿಂದೆ ಬೀಳುತ್ತಿದ್ದ ಕಬ್ಬುಗಳನ್ನು ಆರಿಸಿ ಸರಿದೂಗಿಸುವ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಯಂತ್ರದ ತಿರುಗುವ ಬ್ಲೇಡ್‌ಗೆ ಸಿಲುಕಿಕೊಂಡಿದ್ದಾರೆ. ಕ್ಷಣಾರ್ಧದಲ್ಲಿ ಭಯಾನಕ ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಘಟನೆ ನಡೆದ ತಕ್ಷಣ ಸ್ಥಳೀಯರು ಯಂತ್ರದ ಆಪರೇಟರ್ ಅನ್ನು ನಿಲ್ಲಿಸಲೂ ಪ್ರಯತ್ನಿಸಿದರೂ ಈಗಾಗಲೇ ಶೋಭಾ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದರು.
ತಕ್ಷಣ ಅಥಣಿ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿವಾನಂದ ಭೋಜೆ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅಥಣಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಕುರಿ ತೊಳೆಯಲು ಕೆರೆಗಿಳಿದ ವೈದ್ಯ ದಂಪತಿ ನೀರುಪಾಲು
ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಗುಂಗರಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಹೃದಯವಿದ್ರಾವಕ ದುರಂತ ನಡೆದಿದೆ. ಕುರಿಗಳನ್ನು ತೊಳೆಯಲು ಸ್ಥಳೀಯ ಕೆರೆಗೆ ತೆರಳಿದ್ದ ವೈದ್ಯ ದಂಪತಿ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರು ಗುಂಗರಹಳ್ಳಿ ಗ್ರಾಮದ ಡಾ. ಲಕ್ಷ್ಮಣ್ (71) ಮತ್ತು ಅವರ ಪತ್ನಿ ಜಯಮ್ಮ (60).
ಗುರುವಾರ ಮಧ್ಯಾಹ್ನ ಸುಮಾರು 1:30ರ ಸಮಯದಲ್ಲಿ ಲಕ್ಷ್ಮಣ್ ದಂಪತಿ ತಮ್ಮ ಮನೆ ಬಳಿಯೇ ಇರುವ ಕೆರೆಗೆ ಕುರಿಗಳನ್ನು ಕರೆದುಕೊಂಡು ಹೋಗಿದ್ದರು. ಕೆರೆಯ ಆಳವಿಲ್ಲದ ಭಾಗದಲ್ಲಿ ಕುರಿಗಳನ್ನು ತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಲಕ್ಷ್ಮಣ್ ಅವರ ಕಾಲು ಜಾರಿ ಆಳವಾದ ನೀರಿನಲ್ಲಿ ಬಿದ್ದಿದ್ದಾರೆ. ಕೂಗಾಟ ಕೇಳಿ ಪತಿಯನ್ನು ರಕ್ಷಿಸಲು ಜಯಮ್ಮ ಅವರು ಓಡಿಬಂದು ನೀರಿಗೆ ಇಳಿದಿದ್ದಾರೆ. ಆದರೆ ಇಬ್ಬರೂ ಈಜಲು ಬಾರದ ಕಾರಣ ನೀರಲ್ಲಿ ಮುಲುಗಿ ಸಾವನ್ನಪ್ಪಿದ್ದಾರೆ.
ಕೆರೆಯ ಸುತ್ತಲೂ ಕೆಲಸ ಮಾಡುತ್ತಿದ್ದ ರೈತರು ಮತ್ತು ನೆರೆಹೊರೆಯವರು ಕೂಗಾಟ ಕೇಳಿ ಓಡಿಬಂದಾಗ ದಂಪತಿಗಳು ನೀರಿನಲ್ಲಿ ಮಾಯವಾಗಿದ್ದರು. ತಕ್ಷಣ ಸ್ಥಳೀಯರು ರಾಮನಗರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಕೂಟಗಲ್ ಅಗ್ನಿಶಾಮಕ ಠಾಣೆಯ ಸಿಬ್ಬಂದಿ 15 ನಿಮಿಷಗಳಲ್ಲಿಯೇ ಸ್ಥಳ ತಲುಪಿ, ಬೋಟ್ ಮತ್ತು ಈಜು ತಜ್ಞರ ಸಹಾಯದಿಂದ ಶೋಧ ಕಾರ್ಯ ಆರಂಭಿಸಿದರು. ಸುಮಾರು ಒಂದು ಗಂಟೆಯ ತೀವ್ರ ಪ್ರಯತ್ನದ ನಂತರ ಇಬ್ಬರ ಮೃತದೇಹಗಳನ್ನೂ ಕೆರೆಯಿಂದ ಹೊರತೆಗೆಯಲಾಯಿತು. ಆದರೆ ಆಗಲೇ ಇಬ್ಬರೂ ಮೃತಪಟ್ಟಿದ್ದರು.
ಡಾ. ಲಕ್ಷ್ಮಣ್ ಅವರು ಗುಂಗರಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ 40 ವರ್ಷಗಳಿಂದ ಖ್ಯಾತ ವೈದ್ಯರಾಗಿದ್ದರು. ಆಯುರ್ವೇದ ಮತ್ತು ಆಧುನಿಕ ಚಿಕಿತ್ಸೆಯಲ್ಲಿ ಪರಿಣತಿಯನ್ನು ಹೊಂದಿದ್ದ ಅವರು ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದ ದಾಖಲೆಯಿದೆ. ಜಯಮ್ಮ ಅವರು ಮನೆ ನಿರ್ವಹಣೆಯ ಜೊತೆಗೆ ಪತಿಯ ಚಿಕಿತ್ಸಾಲಯದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗ ಬೆಂಗಳೂರಿನಲ್ಲಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ಮತ್ತೊಬ್ಬ ಮಗಳು ವಿದೇಶದಲ್ಲಿದ್ದಾರೆ.
ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಶ್ ನೇತೃತ್ವದಲ್ಲಿ ಸ್ಥಳ ಮಹಜರ್ ನಡೆಸಿ, ಶವಗಳನ್ನು ರಾಮನಗರ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.





