ಬೆಂಗಳೂರು: ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ. ಒರಿಸ್ಸಾ ಮೂಲದ ಸೀಮಾ ನಾಯಕ್ (25) ಮತ್ತು ರಾಕೇಶ್ ಪಾತ್ರ (23) ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಜೋಡಿ.
ಘಟನೆಯ ಎರಡು ದಿನಗಳ ಮೊದಲು, ರಾಕೇಶ್ ತನ್ನ ಗೆಳತಿ ಸೀಮಾ ಜೊತೆ ಹಣಕ್ಕಾಗಿ ಜಗಳವಾಡಿದ್ದಾನೆ. ರಾಕೇಶ್‌ನ ಕುಡಿತದ ಚಟದಿಂದ ಬೇಸತ್ತಿದ್ದ ಸೀಮಾ, ಈ ಬಾರಿ ಹಣ ನೀಡಲು ನಿರಾಕರಿಸಿದ್ದಾಳೆ. “ಏನಾದರೂ ಮಾಡಿಕೋ, ಹಣ ಕೊಡುವುದಿಲ್ಲ” ಎಂದು ಸೀಮಾ ತಿರುಗೇಟು ನೀಡಿ ಮಲಗಿದ್ದಾಳೆ. ಈ ಘಟನೆಯಿಂದ ಮನನೊಂದ ರಾಕೇಶ್, ರಾತ್ರಿಯ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮರುದಿನ ಬೆಳಗ್ಗೆ ಎದ್ದ ಸೀಮಾ, ರಾಕೇಶ್‌ನ ದೇಹವನ್ನು ನೇಣಿನಿಂದ ತೂಗುತ್ತಿರುವುದನ್ನು ಕಂಡು ಆತಂಕಗೊಂಡಿದ್ದಾಳೆ. ಆಕೆ ತಕ್ಷಣ ಹಗ್ಗವನ್ನು ತುಂಡರಿಸಿ ಅವನನ್ನು ಬದುಕಿಸಲು ಪ್ರಯತ್ನಿಸಿದ್ದಾಳೆ. ಆದರೆ, ರಾಕೇಶ್ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಖಾತ್ರಿಯಾದ ಬಳಿಕ, ಸೀಮಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಎರಡು ದಿನಗಳವರೆಗೆ ಜೋಡಿಯ ಮನೆಯ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಸ್ಥಳೀಯರು, ಅನುಮಾನಗೊಂಡು ಕಿಟಕಿಯ ಗಾಜನ್ನು ಒಡೆದು ಒಳಗೆ ಪರಿಶೀಲಿಸಿದಾಗ ಈ ದುರಂತ ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯರು ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ತನಿಖೆಗೆ ಆಗಮಿಸಿದ ಬೆಂಗಳೂರು ಗ್ರಾಮಾಂತರದ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ, ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಮತ್ತು ಜಿಗಣಿ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.





