ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ. ನಗರದ ಉತ್ತರ–ದಕ್ಷಿಣ ಕಾರಿಡಾರ್ ಆಗಿರುವ ಹಸಿರು ಮಾರ್ಗಕ್ಕೆ (Green Line) ಹೊಸದಾಗಿ 21 ಅತ್ಯಾಧುನಿಕ ಡಿಟಿಜಿ (Distance To Go) ತಂತ್ರಜ್ಞಾನದ ಮೆಟ್ರೋ ರೈಲುಗಳು ಸೇರ್ಪಡೆಗೊಳ್ಳಲಿವೆ. ಈ ಕ್ರಮದಿಂದ ಮೆಟ್ರೋ ಸಂಚಾರ ಇನ್ನಷ್ಟು ವೇಗವಾಗಲಿದೆ.
ಹಸಿರು ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವ 17 ರೈಲುಗಳನ್ನು ಹಂತ ಹಂತವಾಗಿ ನೇರಳೆ ಮಾರ್ಗಕ್ಕೆ (Purple Line) ಸ್ಥಳಾಂತರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹಸಿರು ಮಾರ್ಗಕ್ಕೆ ಸಂಪೂರ್ಣವಾಗಿ ಹೊಸ ರೈಲುಗಳನ್ನು ನಿಯೋಜಿಸುವ ಮೂಲಕ ನಿರ್ವಹಣೆಯನ್ನು ಸುಲಭಗೊಳಿಸುವ ಉದ್ದೇಶ ಹೊಂದಿದೆ.
33.5 ಕಿಲೋಮೀಟರ್ ಉದ್ದದ ಉತ್ತರ–ದಕ್ಷಿಣ ಕಾರಿಡಾರ್ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ವಿಸ್ತಾರಗೊಂಡಿದ್ದು, ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುತ್ತಿದೆ. ಈ ಮಾರ್ಗದಲ್ಲಿ ಹೊಸ ರೈಲುಗಳ ಸೇರ್ಪಡೆ ಆಗುವುದರಿಂದ ಪೀಕ್ ಅವಧಿಯಲ್ಲಿ ಉಂಟಾಗುವ ದಟ್ಟಣೆ ಕಡಿಮೆಯಾಗಲಿದೆ.
2019–20ರಲ್ಲಿ ನಡೆದ ಒಪ್ಪಂದದಂತೆ ಡಿಟಿಜಿ ತಂತ್ರಜ್ಞಾನ ಹೊಂದಿರುವ ಒಟ್ಟು 21 ಮೆಟ್ರೋ ರೈಲುಗಳು (126 ಬೋಗಿಗಳು) ಪೂರೈಕೆ ಆಗಲಿವೆ. ಈ ರೈಲುಗಳನ್ನು ಕೋಲ್ಕತ್ತಾದ ಟಿಟಾಘರ್ ರೈಲ್ ಸಿಸ್ಟಂ ಲಿಮಿಟೆಡ್ (TRSL) ಕಂಪನಿಯ ಸಹಯೋಗದಲ್ಲಿ ಚೀನಾದ ಸಿಆರ್‌ಆರ್‌ಸಿ ಸಂಸ್ಥೆ ತಯಾರಿಸಿದೆ. ಈ ಪೈಕಿ ಒಂದು ಪ್ರೊಟೊಟೈಪ್ ರೈಲು ಚೀನಾದಿಂದ ಈಗಾಗಲೇ ಬೆಂಗಳೂರಿಗೆ ತಲುಪಿದ್ದು, ಉಳಿದ 20 ರೈಲುಗಳು ಕೋಲ್ಕತ್ತಾದಿಂದ ಹಂತ ಹಂತವಾಗಿ ಬರಲಿವೆ.
ಪ್ರೊಟೊಟೈಪ್ ರೈಲು ಕಳೆದ ಜನವರಿಯಲ್ಲೇ ನಗರ ತಲುಪಿದ್ದರೂ, ವಿವಿಧ ತಾಂತ್ರಿಕ ಪರೀಕ್ಷೆಗಳ ಹಿನ್ನೆಲೆಯಲ್ಲಿ ಇದನ್ನು ವಾಣಿಜ್ಯ ಸೇವೆಗೆ ಸೇರಿಸಲಾಗಿರಲಿಲ್ಲ. ಇದೀಗ ಈ ರೈಲನ್ನು ಹಸಿರು ಮಾರ್ಗಕ್ಕೆ ಸೇರಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಆರ್‌ಡಿಎಸ್‌ಒ (Research Designs and Standards Organisation) ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಜಾಲಹಳ್ಳಿ–ಮಂತ್ರಿಸ್ಕ್ವೇರ್ ಸಂಪಿಗೆ ರಸ್ತೆ ನಿಲ್ದಾಣದ ನಡುವೆ ರಾತ್ರಿ ವೇಳೆ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ. ಈ ಪರೀಕ್ಷಾ ಸಂಚಾರ ರಾತ್ರಿ 11.30ರಿಂದ ಬೆಳಗಿನ ಜಾವ 3.30ರವರೆಗೆ ನಡೆಯುತ್ತಿದೆ.
ಮುಂದಿನ ಒಂದೆರಡು ವಾರಗಳಲ್ಲಿ ಎಲ್ಲಾ ತಾಂತ್ರಿಕ ತಪಾಸಣೆ ಪೂರ್ಣಗೊಳ್ಳಲಿದ್ದು, ವಾಣಿಜ್ಯ ಸಂಚಾರ ಆರಂಭಿಸಲು ಆರ್‌ಡಿಎಸ್‌ಒ, ರೈಲ್ವೆ ಸುರಕ್ಷತಾ ಪ್ರಧಾನ ಆಯುಕ್ತಾಲಯ ಹಾಗೂ ರೈಲ್ವೆ ಮಂಡಳಿಯ ಅನುಮೋದನೆ ಅಗತ್ಯವಿದೆ. ಮಾರ್ಚ್ ಅಂತ್ಯದೊಳಗೆ ಈ ಎಲ್ಲಾ ಅನುಮತಿಗಳನ್ನು ಪಡೆಯುವ ವಿಶ್ವಾಸವನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಒಪ್ಪಿಗೆ ದೊರೆತ ಬಳಿಕ ಹೊಸ ಡಿಟಿಜಿ ರೈಲನ್ನು ಹಸಿರು ಮಾರ್ಗಕ್ಕೆ ನಿಯೋಜಿಸಲಾಗುವುದು. ಇದಕ್ಕೆ ಬದಲಾಗಿ ಹಸಿರು ಮಾರ್ಗದಲ್ಲಿದ್ದ ಒಂದು ರೈಲನ್ನು ನೇರಳೆ ಮಾರ್ಗಕ್ಕೆ ಸ್ಥಳಾಂತರಿಸಲಾಗುತ್ತದೆ. ನಂತರ ಕೋಲ್ಕತ್ತಾದಿಂದ ಹೊಸ ರೈಲುಗಳು ಬಂದಂತೆ, ಹಸಿರು ಮಾರ್ಗದಲ್ಲಿ ಆರಂಭಿಕ ಹಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ 17 ರೈಲುಗಳನ್ನು ನೇರಳೆ ಮಾರ್ಗಕ್ಕೆ ವರ್ಗಾಯಿಸಲಾಗುತ್ತದೆ. ಇದರಿಂದ ನೇರಳೆ ಮಾರ್ಗಕ್ಕೆ ಒಟ್ಟು 17 ಹೆಚ್ಚುವರಿ ರೈಲುಗಳು ಹಾಗೂ ಹಸಿರು ಮಾರ್ಗಕ್ಕೆ ಹೊಸದಾಗಿ ನಾಲ್ಕು ಹೆಚ್ಚುವರಿ ರೈಲುಗಳು ಸೇರ್ಪಡೆಯಾಗಲಿವೆ.
ಪ್ರತಿ ಮೂರು ರಿಂದ ನಾಲ್ಕು ನಿಮಿಷಗಳ ಸೂಕ್ತ ಆವರ್ತನ (frequency) ಕಾಯ್ದುಕೊಳ್ಳಲು ಪ್ರತಿ ಕಿಲೋಮೀಟರ್‌ಗೆ ಒಂದು ರೈಲು ಅಗತ್ಯವಿದೆ. ಆದರೆ ನೇರಳೆ ಮತ್ತು ಹಸಿರು ಮಾರ್ಗಗಳು ಒಟ್ಟಾಗಿ ಕೇವಲ 57 ರೈಲುಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಹೊಸ ರೈಲುಗಳ ಸೇರ್ಪಡೆಯಿಂದ ಈ ಅವಧಿ ಕಡಿಮೆಯಾಗಲಿದ್ದು, ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.





