ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಫೋನ್ ನಮ್ಮ ಕೈ ಬಿಡುವುದೇ ಇಲ್ಲ. ವಿಶೇಷವಾಗಿ ಮಲಗುವ ಮುನ್ನ ಫೋನ್ ನೋಡುವ ಅಭ್ಯಾಸ ಬಹುತೇಕ ಜನರಲ್ಲಿ ಸಾಮಾನ್ಯವಾಗಿದೆ. ಆದರೆ ಆರೋಗ್ಯ ತಜ್ಞರು ಮತ್ತು ನಿದ್ರಾ ವಿಜ್ಞಾನಿಗಳು ಈ ಅಭ್ಯಾಸವು ದೇಹ ಮತ್ತು ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.
ಇತ್ತೀಚಿನ ಅಧ್ಯಯನಗಳ ಪ್ರಕಾರ, ರಾತ್ರಿ ಮಲಗುವ ಮುನ್ನ ಮೊಬೈಲ್ ಪರದೆ ನೋಡುವುದರಿಂದ ನಿದ್ರೆಯ ಗುಣಮಟ್ಟ ಸ್ಪಷ್ಟವಾಗಿ ಕುಸಿಯುತ್ತದೆ. ಮೊಬೈಲ್ ಪರದೆಯಿಂದ ಹೊರಬರುವ ನೀಲಿ ಬೆಳಕು (Blue Light) ಮೆಲಟೋನಿನ್ ಎಂಬ ನಿದ್ರೆಗೆ ಅಗತ್ಯವಾದ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ನಿದ್ರೆಗೆ ಜಾರುವುದು ಕಷ್ಟವಾಗುತ್ತದೆ, ಮಧ್ಯರಾತ್ರಿ ಎಚ್ಚರವಾಗುವುದು ಹೆಚ್ಚುತ್ತದೆ ಮತ್ತು ಬೆಳಿಗ್ಗೆ ಎದ್ದಾಗ ದಣಿವು ಕಾಡುತ್ತದೆ.
ಅಧಿಸೂಚನೆಗಳೇ ದೊಡ್ಡ ಸಮಸ್ಯೆ
ಆಸ್ಟ್ರೇಲಿಯಾದ ಅಮೆಜಾನ್ ಕಿಂಡಲ್ ನಡೆಸಿದ ಇತ್ತೀಚಿನ ಅಧ್ಯಯನವು ಫೋನ್ ಬಳಕೆದಾರರ ಚಟುವಟಿಕೆಗಳ ಬಗ್ಗೆ ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಶೇಕಡಾ 78 ಜನರು ಪ್ರತಿ ಗಂಟೆಗೆ ಕನಿಷ್ಠ ಒಂದು ಬಾರಿ ತಮ್ಮ ಫೋನ್ ಪರಿಶೀಲಿಸುತ್ತಾರೆ ಎಂದು ಹೇಳಿದ್ದಾರೆ. ಕೆಲವರು ದಿನಕ್ಕೆ 50ಕ್ಕೂ ಹೆಚ್ಚು ಬಾರಿ ಫೋನ್ ಅನ್‌ಲಾಕ್ ಮಾಡುತ್ತಾರೆ ಎಂಬುದು ಇನ್ನೂ ಆತಂಕಕಾರಿ ಸಂಗತಿಯಾಗಿದೆ.
ಇದೇ ಅಧ್ಯಯನದಲ್ಲಿ, ಶೇಕಡಾ 86 ಜನರು ನಿರಂತರ ಫೋನ್ ಪರಿಶೀಲನೆಯಿಂದ ಸಂಜೆ ವೇಳೆಗೆ ಒತ್ತಡ ಅನುಭವಿಸುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ, ಶೇಕಡಾ 69 ಜನರು ರಾತ್ರಿ ಫೋನ್ ನೋಡುವ ಕಾರಣದಿಂದ ನಿದ್ರೆಯ ಸಮಯವನ್ನು ಮೀರಿಸುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ.
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
ಫೋನ್ ಅನ್ನು ಪದೇಪದೇ ಪರಿಶೀಲಿಸುವ ಅಭ್ಯಾಸ ಕೇವಲ ನಿದ್ರೆಗೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಹಾನಿಕಾರಕ. ದೀರ್ಘಕಾಲದಲ್ಲಿ ಇದು ಆತಂಕ, ಅಸಹನೆ, ಏಕಾಗ್ರತೆಯ ಕೊರತೆ ಮತ್ತು ಕೆಲಸದ ಉತ್ಪಾದಕತೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಯಾವ ಕೆಲಸಕ್ಕೂ ಸಂಪೂರ್ಣ ಗಮನ ಹರಿಸಲು ಆಗದ ಸ್ಥಿತಿ ಉಂಟಾಗುತ್ತದೆ. ಇದರಿಂದ ಜೀವನದ ಒಟ್ಟು ಗುಣಮಟ್ಟವೇ ಕೆಡುತ್ತದೆ.
ಫೋನ್‌ನಿಂದ ದೂರವಿರುವುದು ಹೇಗೆ?
ಇಂದಿನ ದಿನಗಳಲ್ಲಿ ಫೋನ್ ಇಲ್ಲದೆ ಬದುಕುವುದು ಅಸಾಧ್ಯ ಅನ್ನಿಸಿದರೂ, ಕೆಲವು ಸರಳ ಕ್ರಮಗಳನ್ನು ಅಳವಡಿಸಿಕೊಂಡರೆ ಈ ವ್ಯಸನವನ್ನು ಕಡಿಮೆ ಮಾಡಬಹುದು.
-
ಬೆಳಿಗ್ಗೆ ಎದ್ದ ನಂತರದ ಮೊದಲ ಒಂದು ಗಂಟೆ ಮತ್ತು ಮಲಗುವ ಮುನ್ನದ ಕೊನೆಯ ಒಂದು ಗಂಟೆ ಫೋನ್ ಬಳಸದಿರಿ.
-
ವಾರದಲ್ಲಿ ಕನಿಷ್ಠ ಒಂದು ದಿನ ‘ಫೋನ್-ಫ್ರೀ ಡೇ’ ಆಚರಿಸಿ.
-
ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳ ಅನಗತ್ಯ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸಿ.
-
ಹೊರಗಿನ ಚಟುವಟಿಕೆಗಳಿಗೆ ಹೋಗುವಾಗ ಸಾಧ್ಯವಾದರೆ ಫೋನ್ ಮನೆಯಲ್ಲೇ ಬಿಡಿ.
-
ಮಲಗುವ ಕೋಣೆಯಲ್ಲಿ ಫೋನ್ ಚಾರ್ಜ್ ಮಾಡುವುದನ್ನು ತಪ್ಪಿಸಿ.





