ಮಗು ಊಟ ಮಾಡಲ್ಲ, ತಿಂಡಿ ತಿನ್ನಲ್ಲ ಎಂಬುದು ಬಹುತೇಕ ಪ್ರತಿಯೊಬ್ಬ ಪೋಷಕರ ದಿನನಿತ್ಯದ ದೂರಾಗಿದೆ. ಒಂದು ಹೊತ್ತಿನ ಊಟ ಮಾಡಿಸಲು ಪೋಷಕರು ಮಾಡುವ ಹೋರಾಟ ಸಾಹಸವೇ ಸರಿ. ಈ ಸಮಸ್ಯೆಯ ಸುಲಭ ಪರಿಹಾರವಾಗಿ ಅನೇಕ ತಾಯಂದಿರು, ಪೋಷಕರು ಅನುಸರಿಸುತ್ತಿರುವ ‘ಸ್ಮಾರ್ಟ್ ಐಡಿಯಾ’ ಎಂದರೆ ಮಗುವಿನ ಕೈಯಲ್ಲಿ ಸ್ಮಾರ್ಟ್ಫೋನ್ ಕೊಟ್ಟು ಊಟ ಮಾಡಿಸುವುದು. ಆದರೆ, ಈ ಸುಲಭ ತೋರುವ ಪದ್ಧತಿ ನಿಮ್ಮ ಮಗುವಿನ ಭವಿಷ್ಯಕ್ಕೆ ಎಂಥಾ ದೊಡ್ಡ ಅಪಾಯವನ್ನು ತಂದುಕೊಳ್ಳುತ್ತಿದೆ ಎಂಬುದು ತಿಳಿದರೆ ನೀವು ಶಾಕ್ ಆಗೋದು ಖಚಿತ..!
ಹೌದು..ಮಕ್ಕಳು ನೋಡುವ ವೀಡಿಯೋಗಳಲ್ಲಿ ಪ್ರತಿ ಸೆಕೆಂಡಿಗೂ ದೃಶ್ಯ ಬದಲಾಗುವುದು, ಬಣ್ಣಗಳು ಮಿನುಗುವುದು ಮತ್ತು ಧ್ವನಿಗಳು ಹಠಾತ್ತನೇ ಬದಲಾಗುವುದು ಸಾಮಾನ್ಯ. ಈ ವೇಗವಾದ, ನಿರಂತರ ಬದಲಾವಣೆಗಳು ಮಗುವಿನ ಸಣ್ಣ ಮೆದುಳಿನ ಮೇಲೆ ‘ಓವರ್ ಸ್ಟಿಮ್ಯುಲೇಷನ್’ (ಅತಿಯಾದ ಉದ್ದೀಪನ) ಉಂಟುಮಾಡುತ್ತದೆ. ಇದರಿಂದಾಗಿ ಮೆದುಳು ಸಾಮಾನ್ಯ, ನಿಧಾನ ಜೀವನದ ಚಟುವಟಿಕೆಗಳತ್ತ (ಉದಾ: ಪುಸ್ತಕ ನೋಡುವುದು, ಬ್ಲಾಕ್ಸ್ ಹಾಕುವುದು) ಗಮನ ಕೇಂದ್ರೀಕರಿಸಲು ಅಸಮರ್ಥವಾಗುತ್ತದೆ.

ಮೊಬೈಲ್ ಫೋನ್ ಅತಿ ಶೀಘ್ರದಲ್ಲಿ ಬದಲಾಗುವ ದೃಶ್ಯಪಟಲವು ಮಗುವಿನ ‘ಶಾರ್ಟ್ ಅಟೆನ್ಷನ್ ಸ್ಪ್ಯಾನ್’ (ಕಡಿಮೆ ಗಮನದ ಅವಧಿ) ಗೆ ಪ್ರಮುಖ ಕಾರಣವಾಗಿದೆ. ಒಂದು ಆಟಿಕೆಯೊಂದಿಗೆ ಆಡುವಾಗ, ಅದರ ಮೇಲೆ ತಮ್ಮ ಗಮನವನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಬೇಗನೇ ಬೇಸರವೆನಿಸಿ, ಆಟಿಕೆಯನ್ನು ಎಸೆದು ಬಿಡುತ್ತಾರೆ ಮತ್ತು ಮತ್ತೊಂದು ಚಟುವಟಿಕೆಯತ್ತ ಸಾಗಲು ಹಠ ಹಿಡಿಯುತ್ತಾರೆ.
ಮೊಬೈಲ್ ಸ್ಕ್ರೀನ್ನಿಂದ ಬರುವ ನೀಲಿ ಬೆಳಕು (ಬ್ಲೂ ಲೈಟ್) ಮಗುವಿನ ಕಣ್ಣುಗಳು ಮತ್ತು ಮೆದುಳಿನ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಈ ಬೆಳಕು ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ತಡೆಹಿಡಿಯುತ್ತದೆ, ಇದು ನಿದ್ರೆಗೆ ಅಗತ್ಯವಾದ ಹಾರ್ಮೋನ್. ಇದರ ಪರಿಣಾಮವಾಗಿ ಮಕ್ಕಳು ರಾತ್ರಿ ಸಮಯದಲ್ಲಿ ನಿದ್ರೆ ಮಾಡದೇ ಇರುವುದು, ನಿದ್ರೆಯ ಗುಣಮಟ್ಟ ಕೆಡುವುದು ಮತ್ತು ಅಸ್ತವ್ಯಸ್ತವಾದ ನಿದ್ರೆ ಚಕ್ರದಂತಹ ಸಮಸ್ಯೆಗಳು ಉದ್ಭವಿಸುತ್ತವೆ.
ಮಗು ನಿರಂತರವಾಗಿ ಮೊಬೈಲ್ ನೋಡುತ್ತಿದ್ದರೆ, ನಿಜ ಜಗತ್ತಿನಲ್ಲಿ ಜನರೊಂದಿಗೆ ಸಂವಹನ ನಡೆಸುವ ಅವಕಾಶವೇ ಕಡಿಮೆಯಾಗುತ್ತದೆ. ಹೇಗೆ ಮಾತನಾಡಬೇಕು, ಹೇಗೆ ನಗಬೇಕು, ಹೇಗೆ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂಬುದನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಮಕ್ಕಳಲ್ಲಿ ಮಾತು ಕಲಿಯುವಿಕೆ ತಡವಾಗುವುದು, ಭಾಷೆಯ ಅಭಿವೃದ್ಧಿ ನಿಧಾನಗೊಳ್ಳುವುದು ಮತ್ತು ಭಾವನಾತ್ಮಕ ಸಂವೇದನಶೀಲತೆ ಕುಂಠಿತವಾಗುವುದು.
ಮೊಬೈಲ್ ಅನ್ನು ಹಂತಹಂತವಾಗಿ ಬಳಸುವುದರಿಂದ ಮಗುವಿನಲ್ಲಿ ‘ಸ್ಕ್ರೀನ್ ಅಡಿಕ್ಷನ್’ ಅಥವಾ ಸ್ಕ್ರೀನ್ ಅವಲಂಬನೆ ಉಂಟಾಗುವ ಅಪಾಯವಿದೆ. ಫೋನ್ ಅಥವಾ ಟಿವಿ ಆನ್ ಮಾಡದಿದ್ದರೆ ಅವರು ಅಳಲು ಪ್ರಾರಂಭಿಸುತ್ತಾರೆ, ಕಿರಿಚಿಕೊಳ್ಳುತ್ತಾರೆ ಮತ್ತು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಅಸಮರ್ಥರಾಗುತ್ತಾರೆ. ಇದು ಮಕ್ಕಳಲ್ಲಿ ಅತಿಸಕ್ರಿಯತೆ (ಹೈಪರಾಕ್ಟಿವಿಟಿ), ಸಿಟ್ಟು ಮತ್ತು ಹಠದ ಸ್ವಭಾವಕ್ಕೆ ದಾರಿ ಮಾಡಿಕೊಡುತ್ತದೆ.
ಊಟ ಸ್ವಲ್ಪ ಕಡಿಮೆ ಆದರೂ ಪರವಾಗಿಲ್ಲ, ಆದರೆ ಮಗುವಿನ ಭವಿಷ್ಯ ಮಾತ್ರ ಅಪಾಯಕ್ಕೀಡಾಗಬಾರದು. ಇಂದೇ ಈ ಅನಾರೋಗ್ಯಕರ ಪದ್ಧತಿಗೆ ಬ್ರೆಕ್ ಹಾಕಿ. ತಂದೆ-ತಾಯಿಯರು ಎಷ್ಟೇ ಬಿಡುವಿಲ್ಲದಿದ್ದರೂ, ಮಗುವಿಗೆ ಗುಣಮಟ್ಟದ ಸಮಯವನ್ನು ಕೊಟ್ಟು, ಆಟದ ಮೂಲಕ, ಕಥೆ ಹೇಳುವ ಮೂಲಕ ಊಟ ಮಾಡಿಸುವ ಸಂಸ್ಕೃತಿಯನ್ನು ಗಟ್ಟಿಗೊಳಿಸಬೇಕು. ನಿಮ್ಮ ಸ್ವಲ್ಪ ಶ್ರಮ ಮತ್ತು ಸಮಯವೇ ಮಗುವಿಗೆ ಆರೋಗ್ಯಕರ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ನಾಂದಿಯಾಗಬಲ್ಲದು.
ಒಟ್ಟಾರೆ ಮಗುವಿಗೆ ಊಟ ಮಾಡಿಸುವಾಗ ಈ ಮೇಲಿನ ಅಂಶವನ್ನ ಗಮನದಲ್ಲಿಡಿ ಹಾಗೆಯೇ ಮಗುವಿಗೆ ಯಾವುದೇ ಸಮದಲ್ಲಿ ಮೊಬೈಲ್ ಕೊಡುವಾಗ ಎಚ್ಚರಿಕೆಯಿಂದ ಇರಿ. ಜೊತೆಗೆ ನಿಮ್ಮ ಮಗು ಮೊಬೈಲ್ ನೋಡುವಾಗ ಯಾವ ಕಂಟೆಂಟ್ ನೋಡುತ್ತಿದೆ ಎಂದು ಆಗಾಗ ಎಚ್ಚರಿಕೆ ವಹಿಸಿ.





