ಮಳೆಗಾಲವು ಶೀತಲವಾದ ಗಾಳಿ ಮತ್ತು ಸುವಾಸನೆಯನ್ನು ತಂದರೂ, ನಮ್ಮ ಚರ್ಮದ ಆರೋಗ್ಯದ ದೃಷ್ಟಿಯಿಂದ ಅನೇಕ ಸವಾಲುಗಳನ್ನು ಒಡ್ಡುತ್ತದೆ. ವಾತಾವರಣದಲ್ಲಿ ಹೆಚ್ಚಿದ ತೇವಾಂಶ ಮತ್ತು ಬ್ಯಾಕ್ಟೀರಿಯಾ ಮತ್ತು ಫಂಗಸ್‌ಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಬೇಸಿಗೆ ಅಥವಾ ಚಳಿಗಾಲದಲ್ಲಿನ ಸ್ಪಷ್ಟ ಚರ್ಮ ಸಮಸ್ಯೆಗಳು ಇಲ್ಲಿ ಕಾಣಿಸದಿರಬಹುದು. ಆದರೆ ಮಳೆಗಾಲದ ತೊಂದರೆಗಳು ವಿಭಿನ್ನವಾಗಿರುತ್ತವೆ. ಫಂಗಸ್ ಸೋಂಕು, ಮೊಡವೆಗಳು, ದದ್ದು ಮತ್ತು ತುರಿಕೆಗಳು ಸಾಮಾನ್ಯವಾಗಿ ಕಾಡತೊಡಗುತ್ತವೆ. ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಸರಿಯಾದ ಕಾಳಜಿ ತೆಗೆದುಕೊಂಡರೆ, ಮಳೆಗಾಲದಲ್ಲೂ ನಿಮ್ಮ ಚರ್ಮವನ್ನು ಆರೋಗ್ಯಕರ ಮತ್ತು ಕಾಂತಿವಂತವಾಗಿ ಇರಿಸಿಕೊಳ್ಳಬಹುದು.
ಮಳೆಗಾಲದಲ್ಲಿ ಯಾವ ಚರ್ಮ ಸಮಸ್ಯೆಗಳು ಕಾಡುತ್ತವೆ?
-
ಫಂಗಸ್ ಸೋಂಕು: ಇದು ಮಳೆಗಾಲದ ಅತಿ ಸಾಮಾನ್ಯ ಚರ್ಮ ಸಮಸ್ಯೆ. ತೇವವು ಫಂಗಸ್‌ಗಳ ಬೆಳವಣಿಗೆಗೆ ಇಂಬು ನೀಡುತ್ತದೆ. ಕಂಕುಳು, ಸೊಂಟ ಮತ್ತು ಕಾಲುಬೆರಳಿನ ಸಂದುಗಳಂಥ ಭಾಗಗಳಲ್ಲಿ ಕೆಂಪು, ಗುಳ್ಳೆಗಳು, ತುರಿಕೆ ಮತ್ತು ದದ್ದುಗಳ ರೂಪದಲ್ಲಿ ಇದು ಕಾಣಿಸಿಕೊಳ್ಳುತ್ತದೆ.
-
ಮೊಡವೆಗಳು ಮತ್ತು ಬೊಡ್ಡೆಗಳು: ತೇವಾಂಶದಿಂದಾಗಿ ಚರ್ಮದ ರಂಧ್ರಗಳು ಮುಚ್ಚಿಕೊಂಡು, ಅದರಲ್ಲಿ ತೈಲ ಮತ್ತು ಕೊಳೆ ಸಿಕ್ಕಿಹಾಕಿಕೊಂಡಾಗ ಮೊಡವೆಗಳು ಉದ್ಭವಿಸುತ್ತವೆ.
-
ತುರಿಕೆ ಮತ್ತು ಕೆಂಪಗಾಗುವಿಕೆ: ಬೆವರು ಮತ್ತು ತೇವದಿಂದ ಚರ್ಮದಲ್ಲಿ ಉರಿ ಮತ್ತು ತುರಿಕೆ ಉಂಟಾಗಬಹುದು, ವಿಶೇಷವಾಗಿ ಸೂಕ್ಷ್ಮ ಚರ್ಮ ಹೊಂದಿರುವವರಿಗೆ.
-
ಎಕ್ಜಿಮಾ: ಆರ್ದ್ರ ಹವಾಮಾನವು ಕೆಲವು ಜನರಲ್ಲಿ ಎಕ್ಜಿಮಾ ಅನ್ನು ಉಲ್ಬಣಗೊಳಿಸಬಹುದು.
ಚರ್ಮ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ತಡೆಗಟ್ಟಲು ಸೂಚನೆಗಳು
-
ಸ್ವಚ್ಛತೆಗೆ ಅಗ್ರತರ ಪ್ರಾಮುಖ್ಯತೆ
ಮಳೆಗಾಲದಲ್ಲಿ ಸ್ವಚ್ಛತೆಯೇ ಅತಿ ಮಹತ್ವದ್ದು. ಪ್ರತಿದಿನ ಚರ್ಮಕ್ಕೆ ಸರಿಹೊಂದುವ ಮೃದುವಾದ ಕ್ಲೆನ್ಸರ್ ಅಥವಾ ಸಾಬೂನು ಬಳಸಿ ಸ್ನಾನ ಮಾಡಿ. ಇದು ಚರ್ಮದ ಮೇಲಿನ ಕೊಳೆ, ಬೆವರು ಮತ್ತು ರೋಗಾಣುಗಳನ್ನು ತೊಡೆದುಹಾಕುತ್ತದೆ. ಬೆವರು ಹೆಚ್ಚು ಸ್ರವಿಸುವ ಕಂಕುಳು, ಕಾಲು ಮತ್ತು ಚರ್ಮದ ಮಡಿಕೆಗಳ ಭಾಗಗಳನ್ನು ಚೆನ್ನಾಗಿ ಶುಭ್ರಮಾಡಿ. ಸ್ನಾನದ ನಂತರ ಚರ್ಮವನ್ನು ಚೆನ್ನಾಗಿ ಒರೆಸಿ, ಸಂಪೂರ್ಣವಾಗಿ ಒಣಗಿದ ಬಟ್ಟೆಗಳನ್ನು ಧರಿಸಿ. -
ಸರಿಯಾದ ಬಟ್ಟೆಗಳ ಆಯ್ಕೆ
ಬೆವರು ಮತ್ತು ತೇವವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವ ಹತ್ತಿ ಅಥವಾ ಇತರೆ ಪ್ರಕೃತಿಯಿಂದ ಲಭ್ಯವಾಗುವ ಬಟ್ಟೆಗಳನ್ನು ಧರಿಸಿ. ಈ ಬಟ್ಟೆಗಳು ಗಾಳಿ ಸಂಚಾರವಾಗಲು ಅವಕಾಶ ನೀಡುತ್ತವೆ. ಸಿಂಥೆಟಿಕ್ ಬಟ್ಟೆಗಳು ಬೆವರನ್ನು ಸಿಕ್ಕಿಹಾಕಿಕೊಳ್ಳುವುದರಿಂದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ. ಬಿಗಿಯಾದ ಬದಲಿಗೆ ಸಡಿಲವಾದ ಬಟ್ಟೆಗಳನ್ನು ಧರಿಸುವುದರಿಂದ ಚರ್ಮಕ್ಕೆ ಗಾಳಿ ಬರಲು ಸಹಾಯಕವಾಗುತ್ತದೆ. -
ಫಂಗಸ್ ಸೋಂಕಿನ ನಿರ್ವಹಣೆ
ಫಂಗಸ್ ಸೋಂಕಿನ ಲಕ್ಷಣಗಳು ಕಂಡುಬಂದರೆ, ಸ್ವಯಂ ಚಿಕಿತ್ಸೆ ಮಾಡುವುದನ್ನು ತಪ್ಪಿಸಿ. ಚರ್ಮರೋಗ ತಜ್ಞರನ್ನು ಸಂಪರ್ಕಿಸಿ. ಅವರು ಸೂಕ್ತವಾದ ಆಂಟಿ-ಫಂಗಲ್ ಪೌಡರ್, ಕ್ರೀಮ್ ಅಥವಾ ಲೋಶನ್ ಅನ್ನು ಸೂಚಿಸಬಹುದು. ಸಾಮಾನ್ಯವಾಗಿ, ಜಿಂಕ್ ಆಕ್ಸೈಡ್ ಹೊಂದಿರುವ ಉತ್ಪನ್ನಗಳು ಉಪಯುಕ್ತವಾಗಿರುತ್ತವೆ. ಸೋಂಕು ಕಾಣಿಸಿಕೊಂಡ ಭಾಗಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಅತಿ ಮುಖ್ಯ. -
ಸಂತುಲಿತ ಆಹಾರ ಮತ್ತು ಜಲಪಾನ:
ಮಳೆಗಾಲದಲ್ಲಿ ಬಾಯಾರಿಕೆ ಕಡಿಮೆ ಅನುಭವವಾಗುತ್ತದೆ ಎಂಬ ಕಾರಣಕ್ಕೆ ನೀರು ಕುಡಿಯುವುದನ್ನು ನಿರ್ಲಕ್ಷಿಸಬೇಡಿ. ಸಾಕಷ್ಟು ನೀರು ಕುಡಿಯುವುದರಿಂದ ಚರ್ಮದಿಂದ ವಿಷಾನುಗಳು ಹೊರಬರುತ್ತವೆ ಮತ್ತು ಚರ್ಮವು ಜಲಯುಕ್ತವಾಗಿರುತ್ತದೆ. ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಹೆಚ್ಚಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ. -
ಚರ್ಮಕ್ಕೆ ಸೂಕ್ತವಾದ ಮಾಯಿಶ್ಚರೈಸರ್:
ಮಳೆಗಾಲದಲ್ಲಿ ಭಾರೀ ಮತ್ತು ತೈಲಯುಕ್ತ ಮಾಯಿಶ್ಚರೈಸರ್‌ಗಳ ಬಳಕೆಯನ್ನು ತಪ್ಪಿಸಿ. ಅವು ಚರ್ಮದ ರಂಧ್ರಗಳನ್ನು ಮುಚ್ಚಿ ಮೊಡವೆಗಳನ್ನು ಉಂಟುಮಾಡಬಹುದು. ಬದಲಿಗೆ, ಜೆಲ್-ಆಧಾರಿತ ಅಥವಾ ಭಾರವಲ್ಲದ, ನಾನ್-ಕೊಮೆಡೋಜೆನಿಕ್ ಮಾಯಿಶ್ಚರೈಸರ್ ಅನ್ನು ಆರಿಸಿಕೊಳ್ಳಿ.