ಬೆಂಗಳೂರು: ಧಾರ್ಮಿಕ ಕಾರ್ಯಕ್ರಮಗಳು, ಧ್ಯಾನ, ಅಥವಾ ಮನೆಯ ವಾತಾವರಣವನ್ನು ಶುದ್ಧೀಕರಿಸಲು ಬಳಸುವ ಅಗರಬತ್ತಿಯ ಧೂಮವು ಆರೋಗ್ಯಕ್ಕೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಇತ್ತೀಚಿನ ಅಧ್ಯಯನವೊಂದು ಎಚ್ಚರಿಕೆ ನೀಡಿದೆ. ದಕ್ಷಿಣ ಚೀನಾದ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಈ ಅಧ್ಯಯನವು, ಅಗರಬತ್ತಿಯ ಹೊಗೆಯು ಸಿಗರೇಟ್ ಧೂಮಕ್ಕಿಂತಲೂ ಹೆಚ್ಚು ವಿಷಕಾರಿಯಾಗಿದ್ದು, ಇದರಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕ ಸಂಯುಕ್ತಗಳಿರುವುದನ್ನು ಕಂಡುಹಿಡಿದಿದೆ.
ಅಗರಬತ್ತಿಯ ಹೊಗೆಯು ಕಾರ್ಬನ್ ಮಾನಾಕ್ಸೈಡ್, ಸಲ್ಫರ್ ಡೈಆಕ್ಸೈಡ್, ಫಾರ್ಮಾಲ್ಡಿಹೈಡ್ ಮತ್ತು ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳಂತಹ (PAHs) ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿದೆ. ಈ ರಾಸಾಯನಿಕಗಳು ಆಸ್ತಮಾ, ಕ್ರಾನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (COPD) ಮತ್ತು ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದು. 2015ರಲ್ಲಿ ನಡೆದ ಒಂದು ಅಧ್ಯಯನವು ಅಗರಬತ್ತಿಯ ಹೊಗೆಯು ಮ್ಯೂಟಾಜೆನಿಕ್, ಸೈಟೊಟಾಕ್ಸಿಕ್ ಮತ್ತು ಜೆನೋಟಾಕ್ಸಿಕ್ ಗುಣಗಳನ್ನು ಹೊಂದಿದ್ದು, ಜೀವಕೋಶಗಳ ಡಿಎನ್‌ಎಯಲ್ಲಿ ಬದಲಾವಣೆಯನ್ನು ಉಂಟುಮಾಡಿ ಕ್ಯಾನ್ಸರ್‌ಗೆ ದಾರಿಮಾಡಿಕೊಡಬಹುದು ಎಂದು ತಿಳಿಸಿದೆ.
ಈ ಹೊಗೆಯಲ್ಲಿನ ಅತೀ ಸೂಕ್ಷ್ಮ ಕಣಗಳು (PM2.5) ಗಾಳಿಯಲ್ಲಿ ಹರಡಿ, ಶ್ವಾಸಕೋಶದಲ್ಲಿ ಸಿಕ್ಕಿಹಾಕಿಕೊಂಡು ಉರಿಯೂತದ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು. ಇದರಿಂದ ಶ್ವಾಸಕೋಶದ ಉರಿಯೂತ, ತಲೆನೋವು, ಮೈಗ್ರೇನ್, ಒತ್ತಡ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಮಕ್ಕಳು, ವಯಸ್ಸಾದವರು ಮತ್ತು ಶ್ವಾಸಕೋಶದ ಕಾಯಿಲೆಯಿಂದ ಬಳಲುವವರಿಗೆ ಈ ಧೂಮವು ಇನ್ನಷ್ಟು ಅಪಾಯಕಾರಿ. ಇದರಿಂದಾಗಿ, ಗಾಳಿಯಾಡದ ಮನೆಯ ಒಳಾಂಗಣದಲ್ಲಿ ಅಗರಬತ್ತಿಯನ್ನು ದೀರ್ಘಕಾಲ ಬಳಸುವುದು ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟು ಮಾಡಬಹುದು.
ಅಗರಬತ್ತಿಯ ಧೂಮವು ಒಳಾಂಗಣ ಗಾಳಿಯ ಗುಣಮಟ್ಟವನ್ನು ಕೆಡಿಸುತ್ತದೆ. ಇದರಲ್ಲಿರುವ ಸೂಕ್ಷ್ಮ ಕಣಗಳು ಶ್ವಾಸಕೋಶದ ಒಳಹೋಗಿ, ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಉದಾಹರಣೆಗೆ, ದೀರ್ಘಕಾಲ ಈ ಹೊಗೆ ಸೇವಿಸುವವರು ಶ್ವಾಸಕೋಶದ ಕಾರ್ಯಕ್ಷಮತೆ ಕಡಿಮೆಯಾಗುವುದು. ಉಸಿರಾಟದ ತೊಂದರೆಗಳು ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ಈ ಅಪಾಯಗಳು ಸಿಗರೇಟ್ ಧೂಮಕ್ಕೆ ಸಮನಾದ ಅಥವಾ ಕೆಲವು ಸಂದರ್ಭಗಳಲ್ಲಿ ಅದಕ್ಕಿಂತಲೂ ಗಂಭೀರವಾಗಿರಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಈ ಸಮಸ್ಯೆಗೆ ಪರಿಹಾರವಾಗಿ, ಸಂಶೋಧಕರು ಮನೆಯ ಒಳಾಂಗಣದಲ್ಲಿ ಗಾಳಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಗಾಳಿ ಶುದ್ಧೀಕರಣ ಯಂತ್ರಗಳನ್ನು ಬಳಸುವುದು, ಜನರು ಇರುವ ಸ್ಥಳದಲ್ಲಿ ಅಗರಬತ್ತಿಯನ್ನು ಉರಿಸದಿರುವುದು ಮತ್ತು ಸಾಧ್ಯವಾದಷ್ಟು ನೈಸರ್ಗಿಕ ವಾತಾಯನಕ್ಕೆ ಆದ್ಯತೆ ನೀಡುವುದು ಒಳ್ಳೆಯದು. ಇದರ ಜೊತೆಗೆ, ರಾಸಾಯನಿಕ-ಮುಕ್ತ ಅಗರಬತ್ತಿಗಳನ್ನು ಆಯ್ಕೆ ಮಾಡುವುದು ಅಥವಾ ಪರ್ಯಾಯವಾಗಿ ಸುಗಂಧ ದೀಪಗಳು ಅಥವಾ ಎಸೆನ್ಷಿಯಲ್ ಆಯಿಲ್ ಡಿಫ್ಯೂಸರ್‌ಗಳನ್ನು ಬಳಸುವುದು ಆರೋಗ್ಯಕ್ಕೆ ಸುರಕ್ಷಿತವಾಗಿರಬಹುದು.





