ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (ಹೈ ಬ್ಲಡ್ ಪ್ರೆಶರ್) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಹಿಂದೆ ಈ ಸಮಸ್ಯೆ ಹಿರಿಯ ವಸ್ಕರರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಈಗ ಯುವಕರಲ್ಲೂ ಇದು ಸಾಮಾನ್ಯವಾಗಿದೆ. ಆಹಾರ ಪದ್ಧತಿ, ಹೆಚ್ಚಿನ ಒತ್ತಡ, ದೈಹಿಕ ಚಟುವಟಿಕೆಗಳ ಕೊರತೆ, ಅತಿಯಾದ ಉಪ್ಪಿನ ಸೇವನೆ ಹಾಗೂ ಅನಾರೋಗ್ಯಕರ ಜೀವನಶೈಲಿಯೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಬಿಪಿ ದೀರ್ಘಕಾಲದವರೆಗೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದ್ದರೆ ಹೃದಯ, ಮೂತ್ರಪಿಂಡ ಮತ್ತು ಮೆದುಳಿಗೆ ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಸಮಯಕ್ಕೆ ಸರಿಯಾಗಿ ಇದನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಅವಶ್ಯಕ. ಜೀವನಶೈಲಿಯಲ್ಲಿ ಕೆಲವು ಉತ್ತಮ ಬದಲಾವಣೆಗಳನ್ನು ಅಳವಡಿಸಿಕೊಂಡರೆ ಬಿಪಿಯನ್ನು ಸಮತೋಲನದಲ್ಲಿಡಲು ಸುಲಭವಾಗುತ್ತದೆ.
ಬಿಪಿ ನಿಯಂತ್ರಣಕ್ಕೆ ಪಾಲಿಸಬೇಕಾದ ಅಭ್ಯಾಸಗಳು
1. ಸಮತೋಲಿತ ಆಹಾರ ಸೇವನೆ: ಮೊದಲನೆಯದಾಗಿ ಸಮತೋಲನಯುತ ಮತ್ತು ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದು ಅತ್ಯಂತ ಮುಖ್ಯ. ದಿನಕ್ಕೆ 5 ಗ್ರಾಮ್ಗಿಂತ ಕಡಿಮೆ ಉಪ್ಪು ಸೇವಿಸುವುದು ಉತ್ತಮ. ತಾಜಾ ಹಣ್ಣುಗಳು, ಹಸಿರು ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಬೇಕು.
2. ನಿಯಮಿತ ವ್ಯಾಯಾಮ: ದೈಹಿಕ ಚಟುವಟಿಕೆ ಬಿಪಿ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡೆಯುವುದು, ಓಡುವುದು, ಈಜುವುದು ಅಥವಾ ಯೋಗಾಭ್ಯಾಸ ಮಾಡುವುದು ಆರೋಗ್ಯಕರ. ಇದರಿಂದ ಹೃದಯ ಆರೋಗ್ಯ ಸುಧಾರಿಸುತ್ತದೆ ಮತ್ತು ರಕ್ತಪರಿಚಲನೆ ಸರಾಗವಾಗುತ್ತದೆ.
3. ಒತ್ತಡ ನಿರ್ವಹಣೆ: ಮಾನಸಿಕ ಒತ್ತಡವು ಬಿಪಿ ಏರಿಕೆಗೆ ಪ್ರಮುಖ ಕಾರಣವಾಗಿದೆ. ಧ್ಯಾನ, ಪ್ರಾಣಾಯಾಮ, ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು. ಸಕಾರಾತ್ಮಕ ಚಿಂತನೆಯೂ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
4. ಸಾಕಷ್ಟು ನಿದ್ರೆ: ಒಳ್ಳೆಯ ನಿದ್ರೆ ಕೂಡ ಅತ್ಯವಶ್ಯಕ. ನಿದ್ರೆಯ ಕೊರತೆಯಿಂದ ದೇಹದ ಸಮತೋಲನ ಕೆಟ್ಟು ಬಿಪಿ ಹೆಚ್ಚಾಗಬಹುದು. ಪ್ರತಿದಿನ 7-8 ಗಂಟೆಗಳ ಗುಣಮಟ್ಟದ ನಿದ್ರೆ ಅಗತ್ಯ. ರಾತ್ರಿ ತಡವಾಗಿ ಮಲಗುವ ಅಭ್ಯಾಸವನ್ನು ಬದಲಾಯಿಸಬೇಕು.
5. ತೂಕ ನಿಯಂತ್ರಣ: ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಿಪಿ ನಿಯಂತ್ರಣಕ್ಕೆ ಬಹಳ ಸಹಕಾರಿ. ಅಧಿಕ ತೂಕವು ಹೃದಯದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳುವುದು ಮುಖ್ಯ.
ಈ ಕೆಟ್ಟ ಅಭ್ಯಾಸಗಳಿಂದ ದೂರವಿರಿ
ಬಿಪಿ ನಿಯಂತ್ರಣಕ್ಕೆ ಕೆಲವು ಕೆಟ್ಟ ಅಭ್ಯಾಸಗಳನ್ನು ತ್ಯಜಿಸುವುದೂ ಅಗತ್ಯ. ಹೆಚ್ಚು ಉಪ್ಪು, ಎಣ್ಣೆ ಮತ್ತು ಪ್ರೊಸೆಸ್ಡ್ ಆಹಾರ ಸೇವನೆಯಿಂದ ದೂರವಿರಬೇಕು. ಧೂಮಪಾನ ಮತ್ತು ಮದ್ಯಪಾನವೂ ಬಿಪಿ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದು ಮತ್ತು ದೈಹಿಕ ಚಟುವಟಿಕೆಗಳ ಕೊರತೆಯೂ ಅಪಾಯಕಾರಿ.
ಈ ಅಭ್ಯಾಸಗಳನ್ನು ನಿಯಮಿತವಾಗಿ ಅನುಸರಿಸಿದರೆ ಬಿಪಿಯನ್ನು ಸಮತೋಲನದಲ್ಲಿಡಲು ಸಾಧ್ಯ. ಯಾರಿಗಾದರೂ ಈಗಾಗಲೇ ಬಿಪಿ ಸಮಸ್ಯೆ ಇದ್ದರೆ, ವೈದ್ಯರ ಸಲಹೆಯಂತೆ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದು ಅವಶ್ಯಕ. ಆರೋಗ್ಯಕರ ಜೀವನಶೈಲಿ ಮತ್ತು ಸಕಾರಾತ್ಮಕ ಮನೋಭಾವದಿಂದ ಬಿಪಿಯನ್ನು ಸುಲಭವಾಗಿ ನಿಯಂತ್ರಿಸಬಹುದು.





