ಕೋವಿಡ್-19 ಸಾಂಕ್ರಾಮಿಕ ನಂತರ ಜಗತ್ತನ್ನು ಬೆಚ್ಚಿಬೀಳಿಸುತ್ತಿರುವ ಹೊಸ ಇನ್ಫ್ಲುಯೆಂಜಾ A(H3N2) ರೂಪಾಂತರದ ಸುನಾಮಿ. ಅಮೆರಿಕದಲ್ಲಿ ಮಾತ್ರ 2025-2026 ಫ್ಲೂ ಸೀಸನ್‌ನಲ್ಲಿ ಸುಮಾರು 1.1 ಕೋಟಿ ಜನರಿಗೆ ಸೋಂಕು, 1.2 ಲಕ್ಷ ಆಸ್ಪತ್ರೆ ಪ್ರವೇಶ ಮತ್ತು 5 ಸಾವಿರ ಸಾವುಗಳು ಸಂಭವಿಸಿವೆ ಎಂದು ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಅಂದಾಜು ಮಾಡಿದೆ. ಇದರಲ್ಲಿ9 ಮಕ್ಕಳ ಸಾವಾಗಿದೆ. H3N2ಯ ಸಬ್‌ಕ್ಲೇಡ್ K ಎಂಬ ಹೊಸ ರೂಪಾಂತರವೇ ಈ ಭಯಾನಕ ಹರಡುವಿಕೆಗೆ ಕಾರಣವಾಗಿದೆ.
ಈ ವೈರಸ್ 30 ವರ್ಷಗಳಲ್ಲಿ ಅತ್ಯಂತ ತೀವ್ರವಾದ ಫ್ಲೂ ಸೀಸನ್‌ಗೆ ಕಾರಣವಾಗಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ತುರ್ತು ಘಟಕಗಳಲ್ಲಿ ರೋಗಿಗಳ ದೊಡ್ಡ ಸಾಲು ಕಂಡುಬರುತ್ತಿದೆ. ಕಳೆದ ಎರಡು ವಾರಗಳಲ್ಲಿ ಆಸ್ಪತ್ರೆ ಪ್ರವೇಶಗಳ ಸಂಖ್ಯೆ ದ್ವಿಗುಣಗೊಂಡಿದೆ. ಬಹುತೇಕ ರೋಗಿಗಳಲ್ಲಿ ಉಸಿರಾಟದ ಸಮಸ್ಯೆ, ತೀವ್ರ ಜ್ವರ, ಕೆಮ್ಮು, ದೇಹನೋವು ಮತ್ತು ವಾಂತಿ-ಭೇದಿ ಲಕ್ಷಣಗಳು ಕಂಡುಬರುತ್ತವೆ. 2009ರ H1N1 ಸೋಂಕಿನ ನಂತರ ಮಕ್ಕಳಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿರುವುದು ಆತಂಕಕಾರಿ.
ಭಾರತದಲ್ಲೂ ಈ ಸೋಂಕು ಹರಡುತ್ತಿದೆ. ಬೆಂಗಳೂರಿನಲ್ಲಿ ಚಳಿಗಾಲದೊಂದಿಗೆ ನೆಗಡಿ, ಕೆಮ್ಮು, ಜ್ವರದ ಪ್ರಕರಣಗಳು ಹೆಚ್ಚಾಗಿವೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದ್ದು, H3N2 ರೂಪಾಂತರವೇ ಪ್ರಧಾನ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಕರ್ನಾಟಕ ಆರೋಗ್ಯ ಇಲಾಖೆ ಜನವರಿ-ಮಾರ್ಚ್ 2026ರಲ್ಲಿ ಪ್ರಕರಣಗಳು ಹೆಚ್ಚಾಗುವ ನಿರೀಕ್ಷೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಲಕ್ಷಣಗಳು ಯಾವುವು?
ತೀವ್ರ ಜ್ವರ, ಕೆಮ್ಮು, ಗಂಟಲು ನೋವು, ದೇಹನೋವು, ತಲೆನೋವು, ಆಯಾಸ, ಉಸಿರಾಟದ ತೊಂದರೆ. ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ದೀರ್ಘಕಾಲೀನ ಕಾಯಿಲೆಗಳಿರುವವರಿಗೆ ಹೆಚ್ಚು ಅಪಾಯ. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತದೆ.
ಮುಂಜಾಗ್ರತಾ ಕ್ರಮಗಳು:
- ಫ್ಲೂ ಲಸಿಕೆ ಪಡೆಯಿರಿ (ಈ ವರ್ಷದ ಲಸಿಕೆ ಸಬ್‌ಕ್ಲೇಡ್ Kಗೆ ಸಂಪೂರ್ಣ ಮ್ಯಾಚ್ ಆಗದಿದ್ದರೂ ರಕ್ಷಣೆ ನೀಡುತ್ತದೆ).
- N-95 ಮಾಸ್ಕ್ ಬಳಸಿ, ವಿಶೇಷವಾಗಿ ಕೆಮ್ಮು-ಜ್ವರ ಇರುವವರು.
- ಕೈಗಳನ್ನು ಆಗಾಗ ಸೋಪಿನಿಂದ ತೊಳೆಯಿರಿ.
- ಜನದಟ್ಟಣೆ ತಪ್ಪಿಸಿ, ಮನೆಯಲ್ಲೇ ವಿಶ್ರಾಂತಿ ಪಡೆಯಿರಿ.
- ಲಕ್ಷಣಗಳು ಕಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಆ್ಯಂಟಿವೈರಲ್ ಔಷಧಗಳು ಆರಂಭದಲ್ಲೇ ತೆಗೆದುಕೊಂಡರೆ ಉಪಯುಕ್ತ.
CDC ಪ್ರಕಾರ, ಈ ಸೀಸನ್ “ಮಧ್ಯಮ ತೀವ್ರತೆಯ”ದ್ದಾಗಿದ್ದು, ಮುಂದಿನ ಕೆಲವು ವಾರಗಳವರೆಗೆ ಚಟುವಟಿಕೆ ಮುಂದುವರಿಯಲಿದೆ. ಆದರೆ ವೈರಸ್ ಹೆಚ್ಚು ಗಂಭೀರ ರೋಗಕ್ಕೆ ಕಾರಣವಾಗುತ್ತಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಮಕ್ಕಳು ಮತ್ತು ವೃದ್ಧರ ಆರೋಗ್ಯದಲ್ಲಿ ಹೆಚ್ಚು ಕಾಳಜಿ ವಹಿಸಿ. ಸಮಯಕ್ಕೆ ಸರಿಯಾದ ಕ್ರಮ ಕೈಗೊಂಡರೆ ಈ ಸುನಾಮಿಯನ್ನು ನಿಯಂತ್ರಿಸಬಹುದು.





