ಒಂದು ಕಾಲದಲ್ಲಿ ಮರೆವು ಅಥವಾ ಜ್ಞಾಪಕಶಕ್ತಿ ಕುಂದುವಿಕೆ ಎನ್ನುವುದು ಕೇವಲ ವೃದ್ಧಾಪ್ಯದ ಲಕ್ಷಣವಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಇಪ್ಪತ್ತು-ಮೂವತ್ತರ ಹರೆಯದ ಯುವಕರು ಕೂಡ ಏನೋ ಮರೆತುಹೋಯಿತು, ಕೆಲಸದಲ್ಲಿ ಗಮನ ಹರಿಸಲು ಆಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಈಗಿನ ಯುವಕರ ಈ ಸ್ಥಿತಿಯನ್ನ ಬ್ರೈನ್ ಫಾಗ್ (Brain Fog) ಎಂದು ಕರೆಯಲಾಗುತ್ತದೆ.
ಬ್ರೈನ್ ಫಾಗ್ ಎಂದರೇನು?
ಬ್ರೈನ್ ಫಾಗ್ ಎನ್ನುವುದು ಮೆದುಳಿಗೆ ಸಂಬಂಧಿಸಿದ ಒಂದು ಅಸ್ಪಷ್ಟ ಸ್ಥಿತಿ. ಇದು ಒಂದು ಕಾಯಿಲೆಯಲ್ಲದಿದ್ದರೂ, ನಿಮ್ಮ ಮೆದುಳಿನ ಕಾರ್ಯಕ್ಷಮತೆ ಕುಂದುತ್ತಿದೆ ಎಂಬುದರ ಲಕ್ಷಣವಾಗಿದೆ. ಈ ಸ್ಥಿತಿಯಲ್ಲಿ ವ್ಯಕ್ತಿಯು ಮಾನಸಿಕವಾಗಿ ದಣಿದಿರುತ್ತಾನೆ, ವಿಷಯಗಳನ್ನು ಗ್ರಹಿಸಲು ಕಷ್ಟಪಡುತ್ತಾನೆ ಮತ್ತು ಸಣ್ಣ ಪುಟ್ಟ ವಿಚಾರಗಳನ್ನು ನೆನಪಿಟ್ಟುಕೊಳ್ಳಲು ಕಷ್ಟಪಡುತ್ತಾನೆ.
ಬ್ರೈನ್ ಫಾಗ್ ಆವರಿಸಲು ಮುಖ್ಯ ಕಾರಣಗಳೇನು ?
-
ಅತಿಯಾದ ಪೋನ್ ಬಳಕೆ: ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ಅತಿಯಾದ ಬಳಕೆ ಮೆದುಳನ್ನು ಸದಾ ಕಾಲ ಕಾರ್ಯನಿರತವಾಗಿರುವಂತೆ ಮಾಡುತ್ತದೆ. ಇದರಿಂದ ಹೊರಬರುವ ನೀಲಿ ಬೆಳಕು ನಿದ್ರೆಯ ಹಾರ್ಮೋನ್ ಆದ ಮೆಲಟೋನಿನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ.
-
ಒತ್ತಡ (Stress): ಕೆಲಸ ಅಥವಾ ವೈಯಕ್ತಿಕ ಜೀವನದ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನೇರವಾಗಿ ಮೆದುಳಿನ ಮೇಲೆ ಪ್ರಭಾವ ಬೀರಲಿದ್ದು, ಆಲೋಚನಾ ಶಕ್ತಿಯನ್ನು ಮಂದಗೊಳಿಸುತ್ತದೆ.
-
ನಿದ್ರಾಹೀನತೆ: ಮೆದುಳು ತನ್ನನ್ನು ತಾನು ಪುನಶ್ಚೇತನಗೊಳಿಸಿಕೊಳ್ಳಲು (Repair) ಸಾಕಷ್ಟು ನಿದ್ರೆ ಅಗತ್ಯ. ನಿದ್ರೆ ಕೆಡುವುದರಿಂದ ಮರುದಿನ ಮೆದುಳು ಚುರುಕಾಗಿ ಕೆಲಸ ಮಾಡುವುದಿಲ್ಲ.
-
ಆಹಾರ ಮತ್ತು ಹಾರ್ಮೋನ್ ಅಸಮತೋಲನ: ಪೌಷ್ಟಿಕಾಂಶದ ಕೊರತೆ ಮತ್ತು ಹಾರ್ಮೋನ್‌ಗಳಲ್ಲಿನ ಏರುಪೇರು ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ.
ಬ್ರೈನ್ ಫಾಗ್ ಲಕ್ಷಣಗಳು
-
ಸದಾ ತಲೆನೋವು ಅಥವಾ ತಲೆಯಲ್ಲಿ ಏನೋ ಭಾರವಾದ ಅನುಭವ.
-
ಸಣ್ಣ ಪುಟ್ಟ ವಿಷಯಗಳಿಗೂ ಕಿರಿಕಿರಿ ಮತ್ತು ಆಯಾಸ.
-
ಮಾತನಾಡುವಾಗ ಸರಿಯಾದ ಪದಗಳು ಸಿಗದೆ ತಡಕಾಡುವುದು.
-
ಏಕಾಗ್ರತೆಯ ಕೊರತೆ ಮತ್ತು ಗೊಂದಲದ ಆಲೋಚನೆಗಳು.
ಬ್ರೈನ್ ಫಾಗ್‌ನಿಂದ ಹೊರಬರಲು ಪರಿಹಾರಗಳು
ಬ್ರೈನ್ ಫಾಗ್ ತಡೆಯಲು ನಿಮ್ಮ ಜೀವನಶೈಲಿಯಲ್ಲಿ ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ:
-
ಸ್ಕ್ರೀನ್ ಡಿಟಾಕ್ಸ್: ದಿನದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಮೊಬೈಲ್‌ನಿಂದ ದೂರವಿರಿ. ರಾತ್ರಿ ಮಲಗುವ ಒಂದು ಗಂಟೆ ಮೊದಲು ಯಾವುದೇ ಗ್ಯಾಜೆಟ್ ಬಳಸಬೇಡಿ.
-
ಸಮಯ ನಿರ್ವಹಣೆ: ಕೆಲಸದ ಒತ್ತಡ ಕಡಿಮೆ ಮಾಡಲು ಪ್ರತಿ ಕೆಲಸಕ್ಕೂ ಸಮಯ ನಿಗದಿಪಡಿಸಿ. ಒಂದೇ ಸಮಯದಲ್ಲಿ ಹತ್ತಾರು ಕೆಲಸಗಳನ್ನು ಮಾಡುವ ಮಲ್ಟಿಟಾಸ್ಕಿಂಗ್ ಬದಲು ಒಂದೇ ಕೆಲಸದ ಮೇಲೆ ಗಮನ ಹರಿಸಿ.
-
ಆರೋಗ್ಯಕರ ಜೀವನಶೈಲಿ: ಒಮೆಗಾ-3 ಫ್ಯಾಟಿ ಆಸಿಡ್‌ಗಳಿರುವ ಆಹಾರ, ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಪ್ರತಿದಿನ 7-8 ಗಂಟೆಗಳ ಕಾಲ ಗಾಢ ನಿದ್ರೆ ಮಾಡಿ.
-
ಸಾಮಾಜಿಕ ಸಂವಹನ: ಮನುಷ್ಯ ಸಂಘಜೀವಿ. ನಿಮ್ಮ ಆತಂಕಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ. ಕುಟುಂಬದೊಂದಿಗೆ ಕಳೆಯುವ ಗುಣಮಟ್ಟದ ಸಮಯ ಮಾನಸಿಕ ಒತ್ತಡವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.
ಬ್ರೈನ್ ಫಾಗ್ ಅನ್ನು ಆರಂಭದಲ್ಲೇ ಗಮನಿಸಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ, ಮುಂದೆ ಸಂಭವಿಸಬಹುದಾದ ಬೊಜ್ಜು, ಮಧುಮೇಹ ಅಥವಾ ಖಿನ್ನತೆಯಂತಹ ಗಂಭೀರ ಸಮಸ್ಯೆಗಳಿಂದ ಪಾರಾಗಬಹುದು.





